ಯೆನೆಪೊಯದಲ್ಲಿ 'ಯೆನ್ ಉತ್ಸವ್ -2022' ಹಾಸ್ಪಿಟಲ್ ಡೇ ಕಾರ್ಯಕ್ರಮ ಉದ್ಘಾಟನೆ

ಕೊಣಾಜೆ: ಸಮಾಜದಲ್ಲಿ ವೈದ್ಯಕೀಯ ಸೇವೆ ಅತ್ಯಂತ ಮಹತ್ವವಾದುದು. ಯೆನೆಪೊಯ ವೈದ್ಯಕೀಯ ಸಂಸ್ಥೆಯು ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ಅವರು ಹೇಳಿದರು.
ಅವರು ಶನಿವಾರ ದೇರಳಕಟ್ಟೆ ಯೆನೆಪೊಯ ವಿಶ್ವವಿದ್ಯಾಲಯ( ಪರಿಗಣಿತ) ವತಿಯಿಂದ ಯೆನೆಪೊಯ ಯೆಂಡೂರೆನ್ಸ್ ಸಭಾಂಗಣದಲ್ಲಿ ನಡೆದ 'ಯೆನ್ ಉತ್ಸವ್ ' ಹಾಸ್ಪಿಟಲ್ ಡೇ- 2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಬ್ಬಗಳು ಕುಟುಂಬದ ಸದಸ್ಯರು ಎಲ್ಲರೂ ಒಟ್ಟು ಸೇರಿ ಆಚರಿಸುವ ಸಂಭ್ರಮವಾಗಿದೆ. ಯೆನೆಪೊಯ ವಿಶ್ವವಿದ್ಯಾನಿಲಯವು ವೈದ್ಯರು, ಸಿಬ್ಬಂದಿಗಳು , ವಿದ್ಯಾರ್ಥಿಗಳು ಕೂಡಾ ಯೆನ್ ಉತ್ಸವ ಮೂಲಕ ಎಲ್ಲರೂ ಒಟ್ಟು ಸೇರಿ ಈ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ. ಈ ಸಂಭ್ರಮದ ಮೊದಲ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿರುವುದು ನನಗೂ ಸಂತಸವಾಗಿದೆ ಎಂದ ಅವರು, ಯೆನೆಪೋಯ ಅಬ್ದುಲ್ಲಾ ಕುಂಞಿ ಅವರ ಕನಸು, ಪರಿಶ್ರಮದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆಯ ಕೀರ್ತಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಮಾತನಾಡಿ, ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳು ಜತೆಯಾಗಿ ಮುನ್ನಡೆದರೆ ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬೆಳೆಯಲು, ಮುನ್ನಡೆಯಲು ಸಾಧ್ಯವಾಗುತ್ತದೆ.
ರೋಗಿಯ ಮುಖದಲ್ಲಿ ನಗುವನ್ನು ಅರಳಿಸಲು ಕೆಲವೊಮ್ಮೆ ನಮ್ಮ ದುಗುಡವನ್ನು ಮರೆತು ನಾವು ಅವರೊಂದಿಗೆ ಬೆರೆತುಕೊಳ್ಳುವಂತಹ ವೈದ್ಯಕೀಯ ಸೇವೆ ನಿಜವಾಗಿಯೂ ಅದ್ಭುತವಾದುದು.ಉತ್ಸವಗಳು ಕೇವಲ ದೇವಸ್ಥಾನ, ಹಾಗೂ ಇತರ ಕ್ಷೇತ್ರದದಲ್ಲಿ ಮಾತ್ರವಲ್ಲ ಇಂತಹ ಆಸ್ಪತ್ರೆಗಳ ಮೂಲಕವೂ ಎಲ್ಲರ ಒಟ್ಟು ಸೇರುವಿಕೆಯ ಮೂಲಕ ನಡೆದರೆ ಅದಕ್ಕೊಂದು ವಿಶೇಷತೆ ಇದೆ ಎಂದರು.
ಯೆನೆಪೊಯ ವಿವಿ ಕುಲಪತಿ ಪ್ರೊ.ವಿಜಯಕುಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ನಾವು ಜವಬ್ಧಾರಿಯುತವಾಗಿ, ಮಾನವೀಯತೆಯ ಮೌಲ್ಯಗಳೊಂದಿಗೆ ಮುನ್ನಡೆದರೆ ಸಮಾಜಕ್ಕೆ ನಾವು ಕೊಡುವ ಕೊಡುಗೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿ ಕುಲಸಚಿವ ಡಾ.ಗಂಗಾಧರ ಸೋಮಯಾಜಿ ಕೆ.ಎಸ್., ಯೆನೆಪೊಯ ಮೆಡಿಕಲ್ ಕಾಲೇಜು ಡೀನ್ ಡಾ.ಎಂ.ಎಸ್. ಮೂಸಬ್ಬ, ಯೆನೆಪೊಯ ಆಸ್ಪತ್ರೆ ಸಮೂಹದ ಹಿರಿಯ ಸಮಾಲೋಚಕರಾದ ಮಹಮ್ಮದ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್ ಆರ್ .ಎಂ.ಸಲ್ದಾನ ಅವರು ಸ್ವಾಗತಿಸಿದರು. ಸಹಾಯಕ ವೈದ್ಯಕೀಯ ಅಧೀಕ್ಷರಾದ ಡಾ.ನಾಗರಾಜ್ ಶೇಟ್ ಅವರು ಮೆಡಿಕಲ್ ಕಾಲೇಜು ಬಗೆಗೆ ವಿವರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ವೈದ್ಯಕೀಯ ಅಧೀಕ್ಷರಾದ ಡಾ.ಹಬೀಬ್ ರಹ್ಮಾನ್ ಅವರು ವಂದಿಸಿದರು. ನೀಲಿಮಾ ಹಾಗೂ ನೈಶೆಲ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವೈದ್ಯಕೀಯ ಬಹುಮಾನ ವಿತರಿಸಲಾಯಿತು.