ಸೂಕ್ತಪರಿಹಾರ ಇಲ್ಲವೇ ಡಿನೋಟಿಫೈ ಮಾಡಿ ಬದುಕಲು ಬಿಡಿ:ರಾಜ್ಯ ಸರಕಾರಕ್ಕೆ ಬಳ್ಕುಂಜೆ ಸುತ್ತಮುತ್ತಲಿನ ಗ್ರಾಮಸ್ಥರ ಆಗ್ರಹ

ಮಂಗಳೂರು, ಡಿ.10: ಸ್ವ ಇಚ್ಛೆಯಿಂದ ಕೈಗಾರಿಕಾ ಅಭಿವೃದ್ಧಿಗೆ ನೀಡಿರುವ ಭೂಮಿಯನ್ನು ಕೆಐಎಡಿಬಿ ಕೂಡಲೇ ವಶಕ್ಕೆ ಪಡೆದು ಸೂಕ್ತ ಪರಿಹಾರ ಮೊತ್ತ ಪಾವತಿಸಬೇಕು, ಇಲ್ಲವೇ ಡಿನೋಟಿಫಿಕೇಶನ್ ಮಾಡಿ ನೆಮ್ಮದಿಯಿಂದ ಬದುಕಲು ಬಿಡಿ ಎಂದು ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮಸ್ಥರು ರಾಜ್ಯ ಸರಕಾರ, ಕೆಐಎಡಿಬಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಸ್ಥಳೀಯ ಕೈಗಾರಿಕಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಈ ಬಗ್ಗೆ ಮಾತನಾಡಿದರು.
ಯಾವುದೇ ಪೂರ್ವ ಮಾಹಿತಿ ಇಲ್ಲದೆ ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ 2022ರ ಮಾರ್ಚ್ 21ರಂದು ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಗ್ರಾಮದ 1,091 ಎಕ್ರೆ ಪ್ರದೇಶವನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಕುರಿತು ಅಧಿಸೂಚನೆ ಹೊರಡಿಸಿತ್ತು. ಸರಕಾರ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದ ಜಾಗದ ಪೈಕಿ ಶೇ.70ರಷ್ಟು ಪ್ರದೇಶ ಕುರುಚಲು ನಿರ್ಜನ ಪ್ರದೇಶವಾದ ಕಾರಣ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಉತ್ತಮ ಬೆಲೆ ಸಿಗುವುದರಿಂದ ನೀಡಲು ಸಿದ್ಧವಿರುವುದಾಗಿ ಕೆಐಎಡಿಬಿ ಕಚೇರಿಗೆ ಹೋಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಜಾಗ ನೀಡಲು ಸಹಿ ಮಾಡಿರುವ ಸುಮಾರು 150-200 ಮಂದಿ ಭೂ ಮಾಲೀಕರು ಸರಕಾರ ವಶಪಡಿಸಲು ಉದ್ದೇಶಿರುವ ಜಮೀನಿನ ಪೈಕಿ ಸುಮಾರು 750 ಎಕ್ರೆ ಪ್ರದೇಶದ ಮಾಲಕರು. ಸುಮಾರು 250 ಎಕರೆ ಸರಕಾರಿ ಜಮೀನಾದರೆ, ಉಳಿದಿರುವ ಸ್ವಲ್ಪ ಭಾಗ ಜಾಗ ನೀಡಲು ವಿರೋಧಿಸುತ್ತಿರುವವರಿಗೆ ಸೇರಿದ್ದು. ಆದರೆ ಜಾಗ ನೀಡುವುದಾಗಿ ಸಹಿ ಹಾಕಿರುವುದನ್ನು ಹೊರತು ಪಡಿಸಿದರೆ, ನಂತರ ಕೆಐಎಡಿಬಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಆರೋಪಿಸಿದರು.
ಜಮೀನು ನೀಡಲು ಒಪ್ಪಿಗೆ ನೀಡಿರುವುದರಿಂದ ಆರ್‌ಟಿಸಿಯಲ್ಲಿ ಕೆಐಎಡಿಬಿ ಎಂದು ಬದಲಾವಣೆಯಾಗಿದ್ದು, ಈ ಕಾರಣದಿಂದಾಗಿ ಅಡಮಾನ ಇಡಲು, ಮಾರಾಟ ಮಾಡಲು, ಕೃಷಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಇರುವ ಸ್ವಲ್ಪ ಕೃಷಿಗೆ ನೀರು ಹಾಯಿಸಲು, ಮನೆ ಕಟ್ಟುವವರು ಸ್ಪಷ್ಟ ತೀರ್ಮಾನ ಕೈಗೊಳ್ಳಲು, ಮನೆ ರಿಪೇರಿ ಮಾಡಿಸಲು ಸಾಧ್ಯವಾಗದೆ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿದೆ. ಸರ್ಕಾರ, ಇಲಾಖೆ ಸೂಕ್ತ ನಿರ್ಧಾರಕ್ಕೆ ಬರದೇ ಹೋದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಶಂಕರ್ ಬಿ.ಶೆಟ್ಟಿ ಬಳ್ಕುಂಜೆ ಅವರು ಮಾತನಾಡಿ, ಕೆಐಎಡಿಬಿಯವರು ಶೇ.75ರಷ್ಟು ಪ್ರದೇಶದ ಸರ್ವೇ ಮಾಡಿ ಬಳಿಕ ಯಾರದೋ ಸೂಚನೆ ಮೇರೆಗೆ ನಿಲ್ಲಿಸಿದ್ದಾರೆ. ಭೂ ಸ್ವಾಧೀನದ ವಿರುದ್ಧ ಇರುವವರು 5-10 ಮಂದಿ ಭೂ ಮಾಲಕರು ಮಾತ್ರ. ಅವರಿಗೆ ಸುಳ್ಳು ಮಾಹಿತಿ ನೀಡಿ, ಭೂಮಿ ನೀಡದಂತೆ ತಡೆಯಲಾಗಿದೆ. ಕೈಗಾರಿಕೆಗಳು ಬಂದರೆ ಸ್ಥಳೀಯರಿಗೂ ಉದ್ಯೋಗಾವಕಾಶ ದೊರೆತು, ಆ ಭಾಗದ ಅಭಿವೃದ್ಧಿಗೂ ಕಾರಣವಾಗಲಿದೆ ಎಂದರು.
ಕೈಗಾರಿಕಾ ಸಂಘದ ಪ್ರಮುಖರಾದ ಗೌರವ್ ಹೆಗ್ಡೆ, ಸ್ಥಳೀಯರಾದ ಪೌಸ್ಟಿನ್ ಡಿಸೋಜ, ಸಲಹೆಗಾರ ರಿಚರ್ಡ್ ಲೋಬೋ ಉಪಸ್ಥಿತರಿದ್ದರು.