ಮಣಿಪಾಲ ಮಾಹೆಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರ ಪ್ರಾರಂಭ

ಉಡುಪಿ: ಡಿ.11ರಂದು ಭಾರತೀಯ ಭಾಷಾ ದಿವಸ್ ಸಂದರ್ಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗು ವುದು ಮಾಹೆ ಪ್ರಕಟಿಸಿದೆ.
ಖ್ಯಾತ ತಮಿಳು ಕವಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಹುಭಾಷಾ ವಿದ್ವಾಂಸ ಚಿನ್ನಸ್ವಾಮಿ ಸುಬ್ರಹ್ಮಣ್ಯ ಭಾರತಿ ಸ್ಮರಣಾರ್ಥ ಅವರ ಜನ್ಮ ಶತಮಾನೋತ್ಸವನ್ನು ವಿದ್ಯಾಸಂಸ್ಥೆಗಳಲ್ಲಿ ಭಾರತೀಯ ಭಾಷೆಗಳ ಅಧ್ಯಯ ನಕ್ಕೆ ಪೂರಕವಾಗಿ ಆಚರಿಸುವ ಯುಜಿಸಿ ಘೋಷಣೆಯಿಂದ ಸ್ಪೂರ್ತಿ ಪಡೆದು ಈ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮಾಹೆ ತಿಳಿಸಿದೆ.
ಮಾಹೆಯ ಈ ಭಾಷಾ ಅಧ್ಯಯನ ಕೇಂದ್ರದಲ್ಲಿ ಕರ್ನಾಟಕದ ಭಾಷೆಗಳ ಅದರಲ್ಲೂ ಮುಖ್ಯವಾಗಿ ಕನ್ನಡ, ತುಳು, ಕೊಂಕಣಿ, ಬ್ಯಾರಿ ಹಾಗೂ ಕೊಡವ ಭಾಷೆಗಳಿಗೆ ಅವಕಾಶ ನೀಡುವ ಮೂಲಕ ಭಾಷಾ ವೈವಿಧ್ಯತೆಗೆ ಹೆಚ್ಚಿನ ಆದ್ಯತೆ ನೀಡಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗುರಿಗೆ ತನ್ನ ಕಾಣಿಕೆಯನ್ನು ನೀಡಲು ಮಾಹೆ ಬಯಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ಮತ್ತು ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರವು ಮಾಹೆಯ ಭಾಷಾ ವಿಭಾಗದಲ್ಲಿ (ಡಿಒಎಲ್) ಕಾರ್ಯನಿರ್ವಹಿಸಲಿದ್ದು, ಭಾಷಾ ಶಿಕ್ಷಣ ಕಲೆ, ಅನುವಾದ ಹಾಗೂ ಸಾಹಿತ್ಯ ಕಲೆಗಳ ಮೇಲೆ ಕೇಂದ್ರಿತ ಸಂಶೋಧನೆ ಹಾಗೂ ಅಧ್ಯಾಪನವನ್ನು ಹೊಂದಿರುತ್ತದೆ ಎಂದು ಮಾಹೆಯ ಹೇಳಿಕೆ ತಿಳಿಸಿದೆ.







