ದೇಶದ ಅಭಿವೃದ್ಧಿಯಲ್ಲಿ ನಬಾರ್ಡ್‌ನಿಂದ ವಿಶಿಷ್ಟ ಕೊಡುಗೆ: ಡಿಜಿಎಂ ಸಂಗೀತಾ ಎಸ್.ಕರ್ತಾ

ಉಡುಪಿ: ಕಳೆದ 40 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯಲ್ಲಿ ನಬಾರ್ಡ್ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ ಎಂದು ನಬಾರ್ಡ್‌ನ ಡಿಜಿಎಂ ಸಂಗೀತಾ ಎಸ್.ಕರ್ತಾ ಹೇಳಿದ್ದಾರೆ.
ಇತ್ತೀಚೆಗೆ ಮಣಿಪಾಲದ ಕೆನರಾ ಬ್ಯಾಂಕಿನ ಸಿಂಡಿಕೇಟ್ ಟವರ್ಸ್ ಸಭಾಂಗಣದಲ್ಲಿ ನಡೆದ ‘ರಾಜ್ಯದ ಅಭಿವೃದ್ಧಿ ಯಲ್ಲಿ ನಬಾರ್ಡ್ ಸಂಸ್ಥೆಯ ಪಾತ್ರ’ ಎಂಬ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು. ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ನಬಾರ್ಡ್ ಮೂಲಕ ಪ್ರಾಯೋಜಿಸಲ್ಪಟ್ಟ ಸ್ವ-ಸಹಾಯ ಗುಂಪುಗಳ ಕಾರ್ಯಕ್ರಮಗಳಲ್ಲಿ 13.8 ಕೋಟಿ ಕುಟುಂಬಗಳು ಮತ್ತು 1.12 ಕೋಟಿ ಸ್ವ-ಸಹಾಯ ಗುಂಪುಗಳು ಭಾಗಿಗಳಾಗಿ ಇದು ವಿಶ್ವದಲ್ಲೇ ಅತಿ ದೊಡ್ಡ ಮೈಕ್ರೋ ಕ್ರೆಡಿಟ್ ಯೋಜನೆಯಾಗಿ ಹೊರಹೊಮ್ಮಿದೆ ಎಂದವರು ತಿಳಿಸಿದರು.
ನಬಾರ್ಡ್ ಸಂಸ್ಥೆಯ ಮೂಲಕ ಮೂಲ ಸೌಕರ್ಯಗಳಾದ ನೀರಾವರಿ, ಗ್ರಾಮೀಣ ರಸ್ತೆಗಳು, ಸಂಪರ್ಕ ಸೇತುವೆಗಳು, ಶಿಕ್ಷಣ ಕ್ಷೇತ್ರಗಳಿಗೆ ಸಹಾಯ ನೀಡಲಾಗುತ್ತಿದೆ. ಇದರ ಅಡಿಯಲ್ಲಿ ಉಡುಪಿ ಜಲ್ಲೆಯಲ್ಲಿ 1088 ಯೋಜನೆಗಳಿಗೆ 535.90 ಕೋಟಿ ರೂ.ವನ್ನು ಮಂಜೂರು ಮಾಡಲಾಗಿದೆ ಎಂದರು.
ನಬಾರ್ಡ್ ಮೂಲಕ ಉಡುಪಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದ 22 ಫ್ಯಾಕ್ಸ್ ಗಳಿಗೆ ಸಹಾಯ ನೀಡಲಾಗಿದೆ. ಉಡುಪಿ ಸೀರೆ ಪುನರುತ್ಥಾನಕ್ಕಾಗಿ ನಬಾರ್ಡ್ ಸಹಾಯಹಸ್ತ ಚಾಚಿದೆ. ಮೀನಿನ ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿ ಕೆಗೂ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ನಬಾರ್ಡ್ ಮೂಲಕ ಆಯೋಜಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೇಶಕ ಕೆಂಪೇಗೌಡ ವಿಚಾರ ಸಂಕಿರಣ ವನ್ನು ಉದ್ಘಾಟಿಸಿದರು. ಕೆನರಾ ಬ್ಯಾಂಕಿನ ಡಿಜಿಎಂ ಲೀನಾ ಪಿಂಟೋ, ಉಡುಪಿಯ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ. ಪಿಂಜಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.







