ತನಿಖೆಯಲ್ಲಿರುವ ಡೆಫ್ಸಿಸ್ ಸೊಲ್ಯೂಷನ್ ಜೊತೆ ವ್ಯವಹಾರ ಸ್ಥಗಿತಗೊಳಿಸಿದ ರಕ್ಷಣಾ ಸಚಿವಾಲಯ
ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣ

ಹೊಸದಿಲ್ಲಿ,ಡಿ.10: ಆಗಸ್ಟಾ ವೆಸ್ಟ್‌ಲ್ಯಾಂಡ್ (Augusta Westland)ಪ್ರಕರಣದಲ್ಲಿ ಆರೋಪಿಯಾಗಿರುವ ಡೆಫ್ಸಿಸ್ ಸೊಲ್ಯೂಷನ್ಸ್ ಪ್ರೈ.ಲಿ.ಜೊತೆ ವ್ಯವಹಾರವನ್ನು ರಕ್ಷಣಾ ಸಚಿವಾಲಯವು ಸ್ಥಗಿತಗೊಳಿಸಿದೆ.
ಪ್ರಕರಣವು ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಪೂರೈಕೆಗಾಗಿ 2010ರಲ್ಲಿ ಬ್ರಿಟಿಷ್-ಇಟಾಲಿಯನ್ ಕಂಪನಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿದೆ. ಹಗರಣ ನಡೆದ ಸಂದರ್ಭ ಕೇಂದ್ರದಲ್ಲಿ ಕಾಂಗ್ರೆಸ್ (Congress)ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿತ್ತು.
ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ 2019,ಮಾರ್ಚ್‌ನಲ್ಲಿ ಡೆಫ್ಸಿಸ್ ಸೊಲ್ಯೂಷನ್ಸ್ ಮಾಲಿಕ ಸುಷೇನ್ ಗುಪ್ತಾ(Sushen Gupta)ರನ್ನು ಬಂಧಿಸಿತ್ತು. ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.
ಪ್ರಾಸಂಗಿಕವಾಗಿ,ಫ್ರೆಂಚ್ ಆನ್‌ಲೈನ್ ಜರ್ನಲ್ ಮೀಡಿಯಾಪಾರ್ಟ್ ಭಾರತಕ್ಕೆ ರಫೇಲ್ ಯುದ್ಧವಿಮಾನಗಳ ಪೂರೈಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಡೆಫ್ಸಿಸ್ ಸೊಲ್ಯೂಷನ್ಸ್ 10 ಲ.ಯೂರೋ (ಸುಮಾರು 8.62 ಕೋ.ರೂ.)ಗಳನ್ನು ಸ್ವೀಕರಿಸಿತ್ತು ಎಂದು 2021,ಎಪ್ರಿಲ್‌ನಲ್ಲಿ ವರದಿ ಮಾಡಿತ್ತು.
ಆಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ಡೆಫ್ಸಿಸ್ ಸೊಲ್ಯೂಷನ್ಸ್ ವಿರುದ್ಧ ತನಿಖೆಯ ಬಗ್ಗೆ ಸಿಬಿಐನಿಂದ ತಾನು ಮಾಹಿತಿಯನ್ನು ಸ್ವೀಕರಿಸಿದ್ದೇನೆ ಎಂದು ಶುಕ್ರವಾರ ಹೇಳಿದ ರಕ್ಷಣಾ ಸಚಿವಾಲಯವು,ಒಂದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಅದರೊಂದಿಗೆ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
ಸರಕಾರವು ಆರು ಶಸ್ತ್ರಾಸ್ತ್ರ ತಯಾರಿಕೆ ಕಂಪನಿಗಳನ್ನು ನಿಷೇಧಿಸಿದೆ. ಜೊತೆಗೆ 14 ಕಂಪನಿಗಳೊಂದಿಗೆ ವ್ಯವಹಾರಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಎರಡು ಸಂಸ್ಥೆಗಳೊಂದಿಗೆ ವ್ಯವಹಾರಗಳನ್ನು ನಿರ್ಬಂಧಿಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಿಷೇಧಿತ ಕಂಪನಿಗಳಲ್ಲಿ ನಾಲ್ಕು ವಿದೇಶಿ ಮತ್ತು ಎರಡು ಭಾರತೀಯ ಕಂಪನಿಗಳು ಸೇರಿವೆ
ರಫೇಲ್ ಒಪ್ಪಂದ-ಡೆಫ್ಸಿಸ್ ನಂಟು : 2016,ಸೆ.23ರಂದು ರಫೇಲ್ ಒಪ್ಪಂದ ಅಂತಿಮಗೊಂಡ ಬೆನ್ನಿಗೇ ಭಾರತದಲ್ಲಿ ತನ್ನ ಉಪ-ಗುತ್ತಿಗೆದಾರರಲ್ಲಿ ಒಂದಾದ ಡೆಫ್ಸಿಸ್ ಸೊಲ್ಯೂಷನ್‌ಗೆ 10 ಲ.ಯುರೋ (8.62 ಕೋ.ರೂ.)ಗಳನ್ನು ನೀಡಲು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಒಪ್ಪಿಕೊಂಡಿತ್ತು. ರಫೇಲ್ ಯುದ್ಧವಿಮಾನಗಳ 50 ದೊಡ್ಡ ಪ್ರತಿರೂಪ ಮಾದರಿಗಳ ತಯಾರಿಕೆಗೆ ಪಾವತಿಸಲು ಈ ಹಣವನ್ನು ಬಳಸಲಾಗುವುದು ಎಂದು ಡಸಾಲ್ಟ್ ಹೇಳಿದ್ದಾಗಿ ಮೀಡಿಯಾಪಾರ್ಟ್ ಕಳೆದ ವರ್ಷ ವರದಿ ಮಾಡಿತ್ತು.
ಆದರೆ ಮಾದರಿಗಳನ್ನು ನಿಜಕ್ಕೂ ತಯಾರಿಸಲಾಗಿತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳನ್ನು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಏಜೆನ್ಸಿ ಎಎಫ್‌ಎಗೆ ಒದಗಿಸಲು ಡಸಾಲ್ಟ್‌ಗೆ ಸಾಧ್ಯವಾಗಿರಲಿಲ್ಲ.
ಸ್ಯಾಪಿನ್ 2 ಎಂದು ಕರೆಯಲಾಗುವ ಫ್ರೆಂಚ್ ಕಾನೂನಿನಲ್ಲಿ ನಿಗದಿಗೊಳಿಸಲಾದ ಭ್ರಷ್ಟಾಚಾರ ವಿರೋಧಿ ಕಾರ್ಯವಿಧಾನಗಳನ್ನು ಬೃಹತ್ ಕಂಪನಿಗಳು ಜಾರಿಗೊಳಿಸಿವೆಯೇ ಎನ್ನುವುದನ್ನು ಪರಿಶೀಲಿಸಲು 2017ರಲ್ಲಿ ಎಎಫ್‌ಎ ಅನ್ನು ಸ್ಥಾಪಿಸಲಾಗಿತ್ತು ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಹೇಳಿತ್ತು. 2018,ಅಕ್ಟೋಬರ್‌ನಲ್ಲಿ ವಿವಿಧ ವರದಿಗಳು ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರದ ಸಾಧ್ಯತೆಗಳನ್ನು ಬೆಟ್ಟು ಮಾಡಿದ್ದರಿಂದ ಡಸಾಲ್ಟ್‌ನ್ನು ಲೆಕ್ಕಪರಿಶೋಧನೆಗೆ ಒಳಪಡಿಸಲು ಎಎಫ್‌ಎ ನಿರ್ಧರಿಸಿತ್ತು.
ಈ ಪ್ರಕ್ರಿಯೆ ಸಂದರ್ಭ ಡಸಾಲ್ಟ್‌ನ 2017ರ ಲೆಕ್ಕಪತ್ರಗಳಲ್ಲಿ ‘ಗ್ರಾಹಕರಿಗೆ ಉಡುಗೊರೆಗಳು’ಶೀರ್ಷಿಕೆಯಡಿ ಡೆಫಿಸ್‌ಗೆ ಹಣ ಪಾವತಿಯಾಗಿದ್ದು ಎಎಫ್‌ಎ ಗಮನಕ್ಕೆ ಬಂದಿತ್ತು.
ಸ್ಪಷ್ಟ ಅಕ್ರಮಗಳ ಹೊರತಾಗಿಯೂ,ಫ್ರಾನ್ಸ್‌ನ ಬಜೆಟ್ ಸಚಿವಾಲಯ ಮತ್ತು ನ್ಯಾಯ ಸಚಿವಾಲಯಗಳಿಗೆ ಉತ್ತರದಾಯಿಯಾಗಿರುವ ಎಎಫ್‌ಎ ಈ ವಿಷಯವನ್ನು ಪ್ರಾಸಿಕ್ಯೂಟರ್‌ಗಳಿಗೆ ತಿಳಿಸಿರಲಿಲ್ಲ ಎಂದೂ ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಬೆಟ್ಟು ಮಾಡಿತ್ತು.







