ಪಿಯು ವಿದ್ಯಾರ್ಥಿಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ದ.ಕ. ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ

ಕುಂದಾಪುರ, ಡಿ.10: ಪದವಿ ಪೂರ್ವ ಶಿಕ್ಷಣ ಇಲಾಖೆ, ಕುಂದಾಪುರ ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಹಾಗೂ ಎಂ.ಎಂಹೆಗ್ಡೆ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ಗಳ ಸಂಯುಕ್ತ ಆಶ್ರಯದಲ್ಲಿ ಸುಣ್ಣಾರಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಶಸ್ತಿ ಗೆದ್ದುಕೊಂಡಿವೆ.
33 ಶೈಕ್ಷಣಿಕ ಜಿಲ್ಲೆಯ ಒಟ್ಟು 66 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿ ಸಿದ್ದು, ಕೊನೆಯ ಹಂತದ ಪಂದ್ಯಾಟದಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆ ನಡುವೆ ಹಣಾಹಣಿ ಏರ್ಪಟ್ಟಿತ್ತು. ಉತ್ತಮ ಐದು ಪಂದ್ಯದಲ್ಲಿ ಮೂರು ಪಂದ್ಯ ಗೆದ್ದು ದ.ಕ ಜಿಲ್ಲೆಯ ತಂಡ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಉಡುಪಿ ಜಿಲ್ಲೆಯು ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬಾಲಕರ ವಿಭಾಗದಲ್ಲಿ ತೃತೀಯ ಮೈಸೂರು, ಚತುರ್ಥ ತುಮಕೂರು ಹಾಗೂ ಬಾಲಕಿಯರ ವಿಭಾಗದಲ್ಲಿ ತೃತೀಯ ಮೈಸೂರು, ಚತುರ್ಥ ಸ್ಥಾನವನ್ನು ವಿಜಯ ನಗರ ತಂಡ ಗೆದ್ದುಕೊಂಡಿದೆ.
ಬಾಲಕಿಯರ ವಿಭಾಗದಲ್ಲಿ ಉತ್ತಮ ಪಾಸರ್- ದಕ್ಷಿಣ ಕನ್ನಡ ಜಿಲ್ಲೆಯ ತನ್ವಿ, ಉತ್ತಮ ಅಟ್ಯಾಕರ್- ದ.ಕ ಜಿಲ್ಲೆಯ ವೈಷ್ಣವಿ, ಬೆಸ್ಟ್ ಆಲ್‌ರೌಂಡರ್- ಉಡುಪಿ ಜಿಲ್ಲೆಯ ಕೌಸಲ್ಯಾ, ಅತ್ಯುತ್ತಮ ಆಟಗಾರ್ತಿ- ಮಂಗಳೂರು ತಂಡದ ಅಶ್ವಿನಿ, ಬಾಲಕರ ವಿಭಾಗದಲ್ಲಿ ಉತ್ತಮ ಪಾಸರ್- ದ.ಕ ಜಿಲ್ಲೆಯ ಪುನೀತ್, ಉತ್ತಮ ಅಟ್ಯಾಕರ್- ದಕ ಜಿಲ್ಲೆ ತಂಡದ ಭರತ್, ಬೆಸ್ಟ್ ಆಲ್‌ರೌಂಡರ್- ಉಡುಪಿ ತಂಡದ ಭುವನ್ ಪಡೆದುಕೊಂಡರು.
ಸಮಾರೋಪ: ಶನಿವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು.
ದೈಹಿಕ ಶಿಕ್ಷಣ ಉಪನ್ಯಾಸಕ ನಾಗರಾಜ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟಕ್ಕೆ ಸಹಕರಿಸಿದ ವರನ್ನು ಗೌರವಿಸಲಾಯಿತು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ರಮೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಟ್ರಸ್ಟ್ ಅಧ್ಯಕ್ಷ ಎಂ.ಮಹೇಶ್ ಹೆಗ್ಡೆ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿವೇಕೋದಯ ಎಜುಕೇಶನಲ್ ಟ್ರಸ್ಟ್ ಕಿಶೋರ್ ಕುಮಾರ್ ಶೆಟ್ಟಿ, ವಿವೇಕೋದಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋ ಪಧ್ಯಾಯ ರಘುರಾಮ ಶೆಟ್ಟಿ, ರಾಮಕೃಷ್ಣ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕುಂದಾಪುರ ಪದವಿಪೂರ್ವ ಕಾಲೇಜು ಉಪನ್ಯಾಸಕ ಉದಯ್ ಕುಮಾರ್ ಶೆಟ್ಟಿ, ಕಾಳಾವರ, ಗ್ರಾಪಂ ಸದಸ್ಯ ಗಣೇಶ್ ಶೆಟ್ಟಿ, ರಾಜ್ಯ ದೈ.ಶಿ. ಶಿಕ್ಷಕರ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜೀವನ್ ಕುಮಾರ್ ಶೆಟ್ಟಿ, ಶಿಕ್ಷಣ ಇಲಾಖೆ ಕ್ರೀಡಾ ಸಂಯೋಜಕ ದಿನೇಶ್ ಕುಮಾರ್ ಎ. ಮೊದಲಾದವರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಭರತ್ ಶೆಟ್ಟಿ ವಂದಿಸಿದರು. ಶಿಕ್ಷಕ ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.







