‘ಹಳೆ ಬೇರು ಹೊಸ ಚಿಗುರು’ ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ : ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ಉಡುಪಿಯ ಬಡಗುಪೇಟೆಯಲ್ಲಿರುವ ಹತ್ತು ಮೂರು ಇಪತ್ತೆಂಟು ಗ್ಯಾಲರಿಯಲ್ಲಿ ಆಯೋಜಿಸಲಾದ ಕಲಾವಿದ ಜನಾರ್ದನ ಹಾವಂಜೆಯವರ ‘ಹಳೆ ಬೇರು ಹೊಸ ಚಿಗುರು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡ ಲಾಯಿತು.
ಮುಖ್ಯ ಅತಿಥಿಯಾಗಿ ಲೇಖಕಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ಮಾತನಾಡಿ, ಮಕ್ಕಳು ಪ್ರತಿಯೊಂದರಲ್ಲೂ ಜೀವಂತಿಕೆಯನ್ನು ನೋಡುತ್ತಾರೆ. ಆದುದರಿಂದ ನಾವು ಎಷ್ಟೆ ಬೆಳೆದರೂ ಬಾಲಬುದ್ದಿ ಹಾಗೂ ಬೆರಗು ಕಂಗಳು ಇದ್ದರೆ ಮಾತ್ರ ಕಲಾವಿದ ಆಗಲು ಸಾಧ್ಯ. ಕಲಾವಿದನಲ್ಲಿ ಕಲಾಕೃತಿ ಆತನ ಒಳಗೆಯೇ ಮೂಡಿ ರುತ್ತದೆ. ನಿತ್ಯ ಆಗುಹೋಗುಗಳು ಕಲೆ ಆಗಲು ಸಾಧ್ಯವಿಲ್ಲ. ಒಬ್ಬ ಕಲಾವಿದ ಕವಿಯ ಕಣ್ಣಿನಿಂದ ನೋಡಿದಾಗ ಮಾತ್ರ ಅದು ಕಲಾಕೃತಿಯಾಗಿ ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಲಾ ಪ್ರದರ್ಶನವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ ಮಾತನಾಡಿದರು. ಕಲಾವಿದ ಜನಾರ್ದನ ಹಾವಂಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಭಟ್ ವಂದಿಸಿದರು.
ಜನಾರ್ದನ ಹಾವಂಜೆಯವರು ನಿಸರ್ಗದ ಬಗೆಗಿನ ಒಳನೋಟಗಳನ್ನು ತಾವೇ ಸ್ವತಃ ತಯಾರಿಸಿರುವ ಬಾಳೆಗಿ ದಿಂಡು, ಅಡಿಕೆ, ಹೆಂಪಿಯ ಬಳ್ಳಿ, ನೇಯ್ಗೆ ಮಾಡದ ಹತ್ತಿ ಬಟ್ಟೆಯ ಕಾಗದಗಳ ಮೇಲೆ ಜಲವರ್ಣ ಮಾಧ್ಯಮ ಹಾಗೂ ಪ್ರಕೃತಿಯ ಬಣ್ಣಗಳಿಂದ ಕಲಾಕೃತಿಗಳನ್ನು ರಚಿಸಿದ್ದು, ಇಂತಹ ಒಟ್ಟು ೪೪ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಕಲಾ ಪ್ರದರ್ಶನವು ಡಿ.14ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರತನಕ ವೀಕ್ಷಣೆಗೆ ತೆರೆದಿರುತ್ತದೆ.







