ಅಂಬೇಡ್ಕರ್ ವಿರುದ್ಧ ಘೋಷಣೆ ಆರೋಪ: ಕೋಲಾರ ನಗರಸಭೆ ಸದಸ್ಯನ ವಿರುದ್ಧ FIR

ಕೋಲಾರ, ಡಿ.10: ನಗರಸಭೆಯಲ್ಲಿ ಡಿ.6ರಂದು ನಡೆದ ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆಯಲ್ಲಿ ಬಾಬಾ ಸಾಹೇಬ್ ಡಾ: ಬಿ.ಆರ್ ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿದ ನಗರಸಭೆ ಸದಸ್ಯ ಅಂಬರೀಶ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ.
ನಗರಸಭೆ ಸದಸ್ಯ ಅಂಬರೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನೀರಾವರಿ ಹೋರಾಟಗಾರ ವಿ.ಕೆ. ರಾಜೇಶ್ ಗಲ್‌ಪೇಟೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
'ಇದೇ ಡಿಸೆಂಬರ್ 6ರಂದು ನಗರಸಭೆಯಲ್ಲಿ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಪೌರಾಯುಕ್ತೆ ಸುಮಾ ರವರು ಬಾಬಾ ಸಾಬೇಬ್ ಅಂಬೇಡ್ಕರ್ ಫೋಟೋಗೆ ನಮನ ಸಲ್ಲಿಸುವ ಸಂದರ್ಭದಲ್ಲಿ ಏಕಾಏಕಿ ನಗರಸಭೆ ಕಚೇರಿಗೆ ನುಗ್ಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಜತೆಗೆ ಬಾಬಾ 'ಸಾಹೇಬ್ ಅಂಬೇಡ್ಕರ್ ರವರಿಗೆ ಧಿಕ್ಕಾರ ಧಿಕ್ಕಾರ' ಎಂದು ಕೂಗಿರುವುದು ಸಂವಿಧಾನ ಬಾಹೀರವಾಗಿದೆ. ಇದು ದೇಶದ್ರೋಹದ ಕೆಲಸವಾಗಿದ್ದು ಸಂವಿಧಾನದಡಿಯಲ್ಲಿ ಮೀಸಲಾತಿಯಿಂದ ನಗರಸಭಾ ಸದಸ್ಯನಾಗಿರುವ ಅಂಬರೀಶ್ ಅವರು ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿರುವುದು ಬಾಬಾಸಾಬೇಬರು ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ, ಹೀಗಾಗಿ ಇವರ ವಿರುದ್ಧ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಬೇಕು' ಎಂದು ಮನವಿ ಮಾಡಿದ್ದರು.
ರವಿವಾರ ರಾತ್ರಿವರೆಗೂ ಆರೋಪಿ ಬಂಧನಕ್ಕೆ ಕಾಯುವ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಗೌರವಿಸಲಾಗುವುದು. ನಂತರವೂ ಕ್ರಮ ಆಗದಿದ್ದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆರೋಪಿ ಅಂಬರೀಶ್ ಬಂಧನ ಆಗುವವರೆಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಬಣದ ಮುಖಂಡ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಪ್ರಸಾದ್ ತಿಳಿಸಿದ್ದಾರೆ.
ಅಂತೆಯೇ ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂವಳ್ಳಿ ಪ್ರಕಾಶ್, ಕದಂಬ ಸೇನೆ ಜಿಲ್ಲಾಧ್ಯಕ್ಷ ಸೋಮಣ್ಣ ಸಹಾ ಅಂಬರೀಶ್ ವಿರುದ್ದ ಪ್ರತ್ಯೇಕವಾದ ದೂರು ಸಲ್ಲಿಸಿದರು. ಈಗಾಗಲೇ ಮೈಸೂರಿನಲ್ಲೂ ಅಂಬರೀಶ್ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಹೂಹಳ್ಳಿ ಪ್ರಕಾಶ್, ದಲಿತ್ ನಾರಾಯಣಸ್ವಾಮಿ, ,ಜಿ.ವೆಂಕಟಾಚಲಪತಿ, ಮುನಿಯಪ್ಪ, ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪುಷ್ಪಾ, ಖಾದ್ರಿಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಶ್, ಅರಾಭಿಕೊತ್ತನೂರು ಗ್ರಾಮಪಂಚಾಯತಿ ಸದಸ್ಯ ಮುನಿರಾಜ್, ಪಿಸಿ ಬಡಾವಣೆ ಧೀರಜ್, ಅಭಿಭರದ್ವಾಜ್, ಸೀಪೂರ್ ನರಸಿಂಹಮೂರ್ತಿ,ಗಾಂಧಿನಗರ ಮಂಜುನಾಥ್,ಅಂಬೇಡ್ಕರ್ ನಗರದ ಮಂಜುನಾಥ್, ಗೋಪಾಲಪ್ಪ, ಮುಕೇಶ್,ಅನಿಲ್ ಕುಮಾರ್,ಸಂತೋಷ್, ಆಂಜನಪ್ಪ, ಶ್ರೀನಾಥ್ ಇದ್ದರು.







