`ಮಾಂಡೌಸ್' ಚಂಡಮಾರುತ ಪ್ರಭಾವ; ಬೆಂಗಳೂರಿನಲ್ಲೂ ಜಿಟಿ ಜಿಟಿ ಮಳೆ, ಜನ ಜೀವನ ಅಸ್ತವ್ಯಸ್ತ

ಬೆಂಗಳೂರು, ಡಿ.10: ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದಾಗಿ ಎದ್ದಿರುವ `ಮಾಂಡೌಸ್' ಚಂಡ ಮಾರುತದ ಬಿಸಿ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟಿದ್ದು, ಎರಡು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರು ಮಾತ್ರವಲ್ಲದೆ ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆ ಹೆಚ್ಚಾಗಿದೆ. ಬಹುತೇಕ ಕಡೆ ನಿನ್ನೆ ರಾತ್ರಿಯಿಂದ ಶೀತಗಾಳಿ ಸಹಿತ ಜಡಿ ಮಳೆ ಸುರಿಯುತ್ತಿದೆ. ಇನ್ನೂ, ಮಳೆ ಮತ್ತು ಗಾಳಿಯಿಂದ ಜನರ ಓಡಾಟ ತೀವ್ರ ತಗ್ಗಿತ್ತು.
ಬೆಂಗಳೂರಿನಲ್ಲಿ ಶನಿವಾರ 20.6 ಡಿಗ್ರಿ ಸೆಲ್ಸಿಯಸ್‍ನ ಗರಿಷ್ಠ ತಾಪಮಾನ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ಈ ವರ್ಷದ ಡಿಸೆಂಬರ್ ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಗರಿಷ್ಠ ತಾಪಮಾನವಾಗಿದೆ.
ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ತಾಪಮಾನವು 18.4 ಡಿಗ್ರಿ ಸೆಲ್ಸಿಯಸ್ ಆಗಿತ್ತು, ಇದು ಆ ಸಮಯದಲ್ಲಿ 20 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದ ಚೆನ್ನೈಗಿಂತ ಕಡಿಮೆಯಾಗಿದೆ.
ಬೆಂಗಳೂರಿನ ನಗರ ಕೇಂದ್ರದಲ್ಲಿ 18.4, ಬಾಪೂಜಿನಗರದಲ್ಲಿ 19.6, ಹೆಬ್ಬಾಳದಲ್ಲಿ 18.4, ಹೊಂಬೇಗೌಡ ನಗರದಲ್ಲಿ 19.1, ಜಯನಗರದಲ್ಲಿ 19.1, ಸಿಲ್ಕ್ ಬೋರ್ಡ್ ರಸ್ತೆಯಲ್ಲಿ 19.6 ಮತ್ತು ಎಚ್‍ಎಎಲ್‍ನಲ್ಲಿ 19.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.







