ಬಾಂಗ್ಲಾ: ಚುನಾವಣೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಡಾಕ, ಡಿ.10: ಬಾಂಗ್ಲಾದೇಶ(Bangladesh)ದ ಪ್ರಮುಖ ವಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(BNP) ನೇತೃತ್ವದಲ್ಲಿ ರಾಜಧಾನಿ ಡಾಕಾದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆದಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
`ಶೇಖ್ ಹಸೀನಾ ಮತ ಕಳ್ಳಿ' (Sheikh Hasina vote cactus)ಎಂದು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಲ್ಲಿ ತಕ್ಷಣ ಸಾರ್ವತ್ರಿಕ ಚುನಾವಣೆಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸುಮಾರು 2 ಲಕ್ಷದಷ್ಟು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಬಿಎನ್‍ಪಿ ಮೂಲಗಳು ಹೇಳಿವೆ.
ಈ ಮಧ್ಯೆ, ಢಾಕಾದಲ್ಲಿ ಪ್ರತಿಭಟನೆ ನಡೆಯಲು ಅವಕಾಶವಿಲ್ಲ ಎಂದು ಸೂಚಿಸಿದ್ದ ಭದ್ರತಾ ಪಡೆ ಶುಕ್ರವಾರ ಬಿಎನ್‍ಪಿಯ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿ ಇಬ್ಬರು ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದೆ. ಈ ಸಂದರ್ಭ ನಡೆದ ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಕನಿಷ್ಟ ಒಬ್ಬ ಮೃತಪಟ್ಟಿದ್ದು ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿನ ರಾಜಕೀಯ ಬೆಳವಣಿಗೆಯ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಹಾಗೂ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.







