ಆಸ್ತಿಕ-ನಾಸ್ತಿಕ ತಮ್ಮ ವಿಚಾರಗಳಿಗೆ ಪ್ರಾಮಾಣಿಕರಾಗಿರಬೇಕು: ಪ್ರೊ.ಬರಗೂರು

ಬೆಂಗಳೂರು, ಡಿ. 10: ಆಸ್ತಿಕರು ಆಸ್ತಿಕ ವಿಚಾರಗಳಿಗೆ, ನಾಸ್ತಿಕರು ನಾಸ್ತಿಕ ವಿಚಾರಗಳಿಗೆ ಪ್ರಾಮಾಣಿಕರಾಗಿರಬೇಕು. ಗಾಂಧಿ, ವಿವೇಕಾನಂದರು ಆಸ್ತಿಕರಾಗಿದ್ದು, ಅವರ ಆಸ್ತಿಕತೆ ಮನುಷ್ಯ ವಿರೋಧಿ ಆಗಿರಲಿಲ್ಲ ಎಂದು ಸಾಹಿತಿ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಶನಿವಾರ ಇಲ್ಲಿನ ನಯನ ಸಭಾಂಗಣದಲ್ಲಿ ಪಂಪ ಸಾಂಸ್ಕೃ ತಿಕ ಮತ್ತು ಸಾಮಾಜಿಕ ಕೇಂದ್ರವು ಆಯೋಜಿಸಿದ್ದ ಧೀಮಂತರು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುನುಷ್ಯ ವಿರೋಧವಾದದ್ದು ಯಾವುದೇ ಆದರೂ, ಅದು ಅನ್ಯಾಯ ಮತ್ತು ವಿರೋಧಕ್ಕೆ ಅರ್ಹವಾಗಿರುತ್ತದೆ. ನಾವು ಇಂದು ಉತ್ತಮ ಮನುಷ್ಯನ ಶೋಧದಲ್ಲಿ ತೊಡಗಿದ್ದೇವೆ. ನಮ್ಮ ಸಾಹಿತ್ಯ, ರಂಗಭೂಮಿ ಆ ಶೋಧವನ್ನು ಮಾಡುತ್ತಾ ಬಂದಿದೆ ಎಂದರು.
ಯಾರು ಸಾಮಾನ್ಯರಾಗಿರುತ್ತೇವೆ ಎಂದು ಹೇಳಿಕೊಂಡು ಬದುಕುತ್ತಾರೋ ಅವರು ಒಂದಲ್ಲ ಒಂದು ದಿನ ಅಸಾಮಾನ್ಯರಾಗಿರುತ್ತಾರೆ. ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎಂದರು. ಹಾಗಾಗಿ ನಾವು ಇಂದು ಅವರನ್ನು ನಿಮಗಿಂತ ಹಿರಿಯರಿಲ್ಲ ಎನ್ನುತ್ತಿದ್ದೇವೆ. ಅಂದರೆ ನಮಗೆ ನಮ್ಮ ಇತಿ-ಮೀತಿಗಳ ಬಗ್ಗೆ ಅರಿವು ಇದ್ದು, ನಮ್ಮನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಇದು ಉತ್ತಮ ಮನುಷ್ಯನ ಲಕ್ಷಣವಾಗಿರುತ್ತದೆ ಎಂದು ಅವರು ಹೇಳಿದರು.
ಇಂದು ಅಪವ್ಯಾಖ್ಯಾಯನಗಳ ಕಾಲದಲ್ಲಿದ್ದೇವೆ. ಇದು ನಿಜ ವ್ಯಾಖ್ಯಾಯನಗಳ ಕಾಲವಲ್ಲ. ಯಾವ ವಿಚಾರ ಮಾತನಾಡಿದರೂ, ಅದನ್ನು ಅಪಪ್ರಚಾರ ಮಾಡಲು ಅವತಾರ ಎತ್ತಿದ ಪುರುಷರು ನಮ್ಮ ನಡುವೆ ಇದ್ದಾರೆ ಎಂದ ಅವರು, ವಿದ್ಯಾವಂತರೆಲ್ಲ ವಿವೇಕಿಗಳಲ್ಲ, ಅವಿದ್ಯಾವಂತರೆಲ್ಲ ಅವಿವೇಕಿಗಳಲ್ಲ ಎಂದು ಹೇಳಿದರು.
ಎಪ್ಪತರ ದಶಕದಲ್ಲಿ ಬೀದಿನಾಟಕಗಳು ಸರಕಾರದ ಮತ್ತು ವ್ಯವಸ್ಥೆಯ ಬಗ್ಗೆ ವಿಮರ್ಶೆ ಮಾಡಲು ಬಳಸುತ್ತಿದ್ದರು. ನಂತರ ಸರಕಾರದ ಕಾರ್ಯಕ್ರಮಗಳ ಕುರಿತು ಬೀದಿ ನಾಟಕಗಳನ್ನು ಆಡಲು ಪ್ರಾರಂಭಿಸಿದರು. ಹೀಗೆ ರಂಗಭೂಮಿಯಲ್ಲಿ ಅನೇಕ ಹೊಸ ಪ್ರಯೋಗಗಳು ನಡೆಯುತ್ತ ಬಂದಿವೆ ಎಂದು ನನೆಪಿಸಿಕೊಂಡರು. ಬರಹಗಾರ ಡಾ. ಎಚ್.ಎ. ಪಾರ್ಶನಾಥ್, ಸಾಹಿತಿ ಪ್ರೊ.ಸಂಪಿಗೆ ತೋಂಟದಾರ್ಯ, ನಾರಾಯಣ ರಾಯಚೂರ್, ಡಾ.ಬಿ.ವಿ.ರಾಜಾರಾಂ ಮತ್ತಿತರರು ಉಪಸ್ಥಿತರಿದ್ದರು.







