ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗೆ ಚಿಂತನೆ
ಬೆಂಗಳೂರು, ಡಿ.10: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿರುವ ಬೆನ್ನಲ್ಲೇ, ಸರಕಾರ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದೆ.
ಈ ಸಂಬಂಧ ಕಳೆದ ವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆಯನ್ನು ನಡೆಸಿದ್ದು, ಸಭೆಯಲ್ಲಿ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿದಾಗ ರಾಜ್ಯದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳ ಸಾಮಥ್ರ್ಯ ಕಡಿಮೆಯಾಗುತ್ತಿದ್ದು, ಆದುದರಿಂದ ಪಿಯುಸಿ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ಯೋಜನೆಯನ್ನು ಹಾಕಿಕೊಂಡಿದೆ. ಫಲಿತಾಂಶವನ್ನು ಹೆಚ್ಚಿಸುವುದೇ ಹೊಸ ಯೋಜನೆಯ ಮೂಲ ಉದ್ದೇಶವಾಗಿದೆ ಎನ್ನಲಾಗಿದೆ.
ಪಿಯು ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರಗಳನ್ನು ಮಾತ್ರ ಒಳಗೊಂಡಿದೆ. ಒಂದು ಅಂಕದ ಪ್ರಶ್ನೆಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಹಾಗಾಗಿ, ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುತ್ತಿದ್ದರು. ಪದವಿ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆಯಲು ಪಿಯುಸಿ ಅಂಕವೇ ಭದ್ರ ಬುನಾದಿಯಾಗಿದೆ. ಹೀಗಾಗಿ ಬಹು ಆಯ್ಕೆಯ ಪ್ರಶ್ನೆಗಳನ್ನು ಅಳವಡಿಕೆ ಮಾಡಿದರೆ ಪಿಯು ಫಲಿತಾಂಶವು ಉತ್ತಮವಾಗಿರುತ್ತದೆ ಜೊತೆಗೆ ಪದವಿ ದಾಖಲಾತಿ ಕೂಡ ಹೆಚ್ಚುತ್ತದೆ ಎಂಬುದು ಸರಕಾರದ ಚಿಂತನೆಯಾಗಿದೆ.
ಇನ್ನು ಈಗಾಗಲೇ 2022-23ನೆ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟವಾಗಿದ್ದು, ಮಾರ್ಚ್ 9ರಿಂದ 29ರ ವರೆಗೆ ಪರೀಕ್ಷೆಗಳು ನಡೆಯಲಿವೆ.