ಮುಸ್ಲಿಮರ ವಿವಾಹದ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಿದ ಎನ್‌ಸಿಡಬ್ಲ್ಯೂ

ಹೊಸದಿಲ್ಲಿ, ಡಿ.10: ಮುಸ್ಲಿಮರ ವಿವಾಹದ ಕನಿಷ್ಠ ವಯೋಮಿತಿಯನ್ನು ಇತರ ಸಮುದಾಯಗಳಿಗೆ ಸಮಾನವಾಗಿ ನಿಗದಿಪಡಿಸಬೇಕೆಂದು ಕೋರಿ ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿರುವುದಾಗಿ ಕಾನೂನು ಸುದ್ದಿ ಜಾಲತಾಣ ‘ಬಾರ್ ಆ್ಯಂಡ್ ಬೆಂಚ್’ ಶನಿವಾರ ವರದಿ ಮಾಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮುಸ್ಲಿಂ ಸ್ತ್ರೀಯರು ಪ್ರೌಢಾವಸ್ಥೆ (ಅಂದಾಜು 15 ವರ್ಷ)ಯನ್ನು ತಲುಪುವ ವಯಸ್ಸನ್ನು, ವಿವಾಹದ ಕನಿಷ್ಠ ವಯೋಮಿತಿಯೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂಹಿಂದೂಗಳು, ಬುದ್ಧರು, ಸಿಖ್ಖರು ಹಾಗೂ ಜೈನ, ಕ್ರೈಸ್ತ ಮತ್ತು ಪಾರ್ಸಿ ಸಮುದಾಯಗಳಲ್ಲಿ ಪುರುಷರಿಗೆ 21 ವರ್ಷ ಹಾಗೂ ಮಹಿಳೆಯರಿಗೆ 18 ವರ್ಷವೆಂದು ನಿಗದಿಪಡಿಸಲಾಗಿದೆ.
ಮುಸ್ಲಿಮರಲ್ಲಿ ಪ್ರೌಢಾವಸ್ಥೆಗೆ ತಲುಪುವ ವಯಸ್ಸಿನಲ್ಲಿ ವಿವಾಹವಾಗುವುದಕ್ಕೆ ಅವಕಾಶ ನೀಡುವುದು ತಾರತಮ್ಯದಿಂದ ಕೂಡಿದ್ದಾಗಿದೆ ಹಾಗೂ ದಂಡನಾತ್ಮಕ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಎನ್‌ಸಿಡಬ್ಲ್ಯು ತನ್ನ ಅರ್ಜಿಯಲ್ಲಿ ತಿಳಿಸಿದೆ.





