ಗುವಾಹಟಿ ಐಐಟಿ ಪ್ರೊಫೆಸರ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
![ಗುವಾಹಟಿ ಐಐಟಿ ಪ್ರೊಫೆಸರ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಗುವಾಹಟಿ ಐಐಟಿ ಪ್ರೊಫೆಸರ್ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ](https://www.varthabharati.in/sites/default/files/images/articles/2022/12/10/359671-1670696415.jpg)
ಗುವಾಹಟಿ, ಡಿ.10: ಇಲ್ಲಿನ ಭಾರತೀಯ ತಂತ್ರಜ್ಞಾನ ಶಿಕ್ಷಣಸಂಸ್ಥೆ (ಐಐಟಿ)ಯ ಸಹಾಯಕ ಪ್ರೊಫೆಸರ್ ಒಬ್ಬರು, ಸಂಸ್ಥೆಯ ವಸತಿಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ಪ್ರೊಫೆಸರ್ರನ್ನು 47 ವರ್ಷ ವಯಸ್ಸಿನ ಡಾ. ಸಮೀರ್ ಕಮಾಲ್ ಎಂದು ಗುರುತಿಸಲಾಗಿದೆ. ಅವರು ಗುವಾಹಟಿಯ ಐಐಟಿಯಲ್ಲಿ ಗಣಿತ ವಿಭಾಗದ ಸಹಾಯಕ ಪ್ರೊಫೆಸರ್ ಆಗಿದ್ದರು.
ಅವರ ವಸತಿಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಐಐಟಿ ಗುವಾಹಟಿ ಆಡಳಿತ ವರ್ಗದ ಕರೆ ಮಾಡಿದ ಬಳಿಕ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಸಮೀರ್ ಅವರಿದ್ದ ಕೊಠಡಿಯ ಬಾಗಿಲು ಮುರಿದು ಒಳಪ್ರವೇಶಿಸಿದ್ದರು. ಅಲ್ಲಿ ಡಾ.ಸಮೀರ್ರ ಮೃತದೇಹ ನೇಣುಬಿಗದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದೊಂದು ಆತ್ಮಹತ್ಯೆಯ ಪ್ರಕರಣವೆಂದು ಶಂಕಿಸಲಾಗಿದೆಯೆಂದು ಕಾಮರೂಪ ಜಿಲ್ಲೆಯ ಪೊಲೀಸ್ ಅಧೀಕ್ಷಕ ಹಿತೇಶ್ಚಂದ್ರ ರೇ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೃತ ಪ್ರೊಫೆಸರ್ ಸಮೀರ್ ಅವರು ಹೊಸದಿಲ್ಲಿಯ ಪಶ್ಚಿಮ ವಿಹಾರ್ನ ನಿವಾಸಿಯಾಗಿದ್ದಾರೆ.