ಬೆಂಗರೆ: ಕಾರು ಢಿಕ್ಕಿಯಾಗಿ 7 ಮಕ್ಕಳಿಗೆ ಗಾಯ

ಮಂಗಳೂರು,ಡಿ.11: ನಗರ ಹೊರವಲಯದ ಬೆಂಗರೆಯ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ಕಾರೊಂದು ಢಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಬಡಿದ ಘಟನೆ ರವಿವಾರ ನಡೆದಿದ್ದು, ಇದರಿಂದ 7 ಮಕ್ಕಳಿಗೆ ಗಾಯವಾಗಿದೆ.
ಗಾಯಗೊಂಡ ಮಕ್ಕಳನ್ನು ನಾಶಿಕ್, ಶಬೀಬ್, ಶಮ್ಮಾಝ್, ಮುಶೈಫ್, ಅರಾಫತ್, ಶಾಬಿಕ್, ನಹೀಂ ಎಂದು ಗುರುತಿಸಲಾಗಿದೆ. ಈ ಮಕ್ಕಳು ಸುಮಾರು 6ರಿಂದ 15 ವರ್ಷ ಪ್ರಾಯದೊಳಗಿನವರಾಗಿದ್ದಾರೆ. ಮಕ್ಕಳ ಕೈ, ಕಣ್ಣು ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಬೆಂಗರೆಯ ಸೂಪರ್ ಸ್ಟಾರ್ ಆಟದ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಚಾಲಕ ನಿಯಂತ್ರಣ ತಪ್ಪಿದ ಕಾರು ಮಕ್ಕಳಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಅಲ್ಲದೆ ಈ ಕಾರು ವಿದ್ಯುತ್ ಕಂಬಕ್ಕೂ ಬಡಿಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಸ್ಥಳೀಯರು ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಐವರು ಮಕ್ಕಳನ್ನು ಒಳ ರೋಗಿಗಳಾಗಿ ದಾಖಲಿಸಲಾಗಿದೆ.