ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ: 150ನೇ ವರ್ಷದ ಸಂಭ್ರಮದ ಕಾರ್ಯಾಲಯ ಉದ್ಘಾಟನೆ

ಮಂಗಳೂರು, ಡಿ.11: ನಗರದ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ 150ನೇ ವರ್ಷದ ಸಂಭ್ರಮದ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ರವಿವಾರ ನಡೆಯಿತು.
ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಕಂಕನಾಡಿ ಗರಡಿ ಪುಣ್ಯ ಕ್ಷೇತ್ರವಾಗಿದ್ದು, ಇಂತಹ ಕ್ಷೇತ್ರದಲ್ಲಿ ನಡೆಯುತ್ತಿರುವ 150ನೇ ವರ್ಷ ಕಾರ್ಯಕ್ರಮಗಳುಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್ ಗರಡಿಯ ಮುಂಭಾಗದ ಪ್ರಧಾನ ರಸ್ತೆ ಸ್ಮಾರ್ಟ್‌ಸಿಟಿ ಯೋಜನೆಯಡಿ 30 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಉತ್ಸವಕ್ಕೆ ಮುನ್ನ ಕಾಮಗಾರಿ ಪೂರ್ಣ ಗೊಳ್ಳಲಿದೆ. ಮಂಗಳೂರು ಮಹಾನಗರಪಾಲಿಕೆ, ಸರಕಾರದಿಂದ ಈ ಉತ್ಸವದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಗರಡಿ ಕ್ಷೇತ್ರದ 150ನೇ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ. ಮೋಹನ್ ಉಜ್ಜೋಡಿ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಉಪಾಧ್ಯಕ್ಷ ಎ. ಕೃಷ್ಣಮೂರ್ತಿ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ಶೆಟ್ಟಿ, ಗರಡಿ ಕ್ಷೇತ್ರದ ಮೊಕ್ತೇಸರರಾದ ದಾಮೋದರ ನಿಸರ್ಗ, ದಿವರಾಜ್, ವಿಠಲ್, ಜೆ. ಕಿಶೋರ್ ಕುಮಾರ್, ಎ. ವಾಮನ ಆಳಪೆ, ಜೆ. ವಿಜಯ್ ಉಪಸ್ಥಿತರಿದ್ದರು.
ದಿನೇಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಪೊರೇಟರ್ ಸಂದೀಪ್ ಗರೋಡಿ ವಂದಿಸಿದರು.