ಮೊರೊಕ್ಕೊ ‘‘ಈ ವಿಶ್ವಕಪ್‌ನ ರಾಕಿ ಬಲ್ಬೋವ’’ : ಕೋಚ್ ವಾಲಿದ್ ರಿಗ್ರೇಗಿ

ದೋಹಾ, ಡಿ. 11: ನನ್ನ ತಂಡವು ‘‘ಈ ವಿಶ್ವಕಪ್‌ನ ರಾಕಿ ಬಲ್ಬೋವ’’ ಎಂಬುದಾಗಿ ಮೊರೊಕ್ಕೊ ಫುಟ್ಬಾಲ್ ತಂಡದ ಕೋಚ್ ವಾಲಿದ್ ರಿಗ್ರೇಗಿ ಹೇಳಿದ್ದಾರೆ. ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಆಫ್ರಿಕ ತಂಡವಾಗಿ ಮೊರೊಕ್ಕೊ ಹೊರಹೊಮ್ಮಿದ ಬಳಿಕ ಶನಿವಾರ ಅವರು ಈ ಹೇಳಿಕೆ ನೀಡಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ಚುಗಲ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಮೊರೊಕ್ಕೊ ಖತರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದೆ. ಅದು ಸೆಮಿಫೈನಲ್‌ನಲ್ಲಿ ಬುಧವಾರ ರಾತ್ರಿ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಅದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿತ್ತು. ಅದಕ್ಕೂ ಮೊದಲು, ಗುಂಪು ಹಂತದಲ್ಲಿ ಎರಡನೇ ವಿಶ್ವ ರ್ಯಾಂಕಿಂಗ್‌ನ ಬೆಲ್ಜಿಯಮ್ ತಂಡವನ್ನು ಮಣಿಸಿತ್ತು.
‘ರಾಕಿ ಬಲ್ಬೋವ’ ಸಿಲ್ವೆಸ್ಟರ್ ಸ್ಟಲೋನ್ ನಟಿಸಿರುವ ಮತ್ತು ನಿರ್ದೇಶಿಸಿರುವ ಹಾಲಿವುಡ್ ಚಿತ್ರವಾಗಿದೆ. 2006ರಲ್ಲಿ ಬಿಡುಗಡೆಗೊಂಡ ಚಿತ್ರವು, ನಿವೃತ್ತ ಬಾಕ್ಸರ್ ರಾಕಿ ಬಲ್ಬೋವ ತನಗೆ ಆಕಸ್ಮಿಕವಾಗಿ ಎದುರಾಗುವ ಸವಾಲನ್ನು ಸ್ವೀಕರಿಸಿ ಬಾಕ್ಸಿಂಗ್ ರಿಂಗ್‌ನಲ್ಲಿ ಹೋರಾಡಿ ಎದುರಾಳಿಯನ್ನು ಹೊಡೆದುರುಳಿಸುವ ಕತೆಯನ್ನು ಹೊಂದಿದೆ.
‘‘ನಾವು ರಾಕಿ ಚಿತ್ರವನ್ನು ನೋಡುವಾಗ ರಾಕಿ ಬಲ್ಬೋವರನ್ನು ಬೆಂಬಲಿಸಬೇಕೆಂದು ಅನಿಸುತ್ತದೆ. ಯಾಕೆಂದರೆ ಅವರ ಕಠಿಣ ಪರಿಶ್ರಮ ಮತ್ತು ಬದ್ಧತೆಯನ್ನು ನಾವು ಗೌರವಿಸಬೇಕಾಗುತ್ತದೆ. ನಾವು ಈ ವಿಶ್ವಕಪ್‌ನ ರಾಕಿ ಬಲ್ಬೋವ ಎಂದು ನನಗೆ ಅನಿಸುತ್ತದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ರಿಗ್ರೇಗಿ ಹೇಳಿದರು.







