ದಿಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ದನೆಯ ಸರತಿ, ವ್ಯಾಪಕ ವಿಳಂಬದ ದೂರಿನ ಹಿನ್ನೆಲೆಯಲ್ಲಿ ಸಚಿವ ಸಿಂಧಿಯಾ ದಿಢೀರ್ ಭೇಟಿ
![ದಿಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ದನೆಯ ಸರತಿ, ವ್ಯಾಪಕ ವಿಳಂಬದ ದೂರಿನ ಹಿನ್ನೆಲೆಯಲ್ಲಿ ಸಚಿವ ಸಿಂಧಿಯಾ ದಿಢೀರ್ ಭೇಟಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ದನೆಯ ಸರತಿ, ವ್ಯಾಪಕ ವಿಳಂಬದ ದೂರಿನ ಹಿನ್ನೆಲೆಯಲ್ಲಿ ಸಚಿವ ಸಿಂಧಿಯಾ ದಿಢೀರ್ ಭೇಟಿ](https://www.varthabharati.in/sites/default/files/images/articles/2022/12/12/359788-1670825862.gif)
ಹೊಸದಿಲ್ಲಿ:ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಪ್ರಕ್ರಿಯೆಯಲ್ಲಿ ಉಂಟಾಗುತ್ತಿರುವ ಭಾರೀ ವಿಳಂಬಗಳು ಹಾಗೂ ಅಲ್ಲಿರುವ ಉದ್ದನೆಯ ಸರತಿ ಸಾಲುಗಳ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ದೂರಿಕೊಂಡ ನಂತರ ಕೇಂದ್ರ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರು ಇಂದು ತಮ್ಮ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಮ್ಮ ಭೇಟಿಯ ವೇಳೆ ಸಚಿವರು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಜೊತೆಗೂ ಸಂವಹನ ನಡೆಸಿದ್ದಾರೆ.
ರವಿವಾರ ವಿಮಾನ ನಿಲ್ದಾಣದ ಟರ್ಮಿನಲ್-3 ನಲ್ಲಿ ಉಂಟಾದ ವಿಳಂಬದ ಕುರಿತಂತೆ ಹಲವು ಪ್ರಯಾಣಿಕರು ದೂರಿಕೊಂಡಿದ್ದರು. ಪ್ರಯಾಣಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ಕಡಿಮೆಗೊಳಿಸಲು ಸರ್ವಪ್ರಯತ್ನ ನಡೆಸಲಾಗುವುದೆಂದು ವಿಮಾನ ನಿಲ್ದಾಣ ಅಧಿಕಾರಿಗಳು ಭರವಸೆ ನೀಡಿದ್ದರು.
ಸಮಸ್ಯೆ ಪರಿಹಾರಕ್ಕೆ ನಾಲ್ಕು ಅಂಶಗಳ ಸೂತ್ರವನ್ನೂ ಪ್ರಸ್ತಾಪಿಸಲಾಗಿದ್ದು ಎಕ್ಸ್-ರೇ ಸ್ಕ್ರೀನಿಂಗ್ ಯಂತ್ರಗಳ ಸಂಖ್ಯೆ ಹೆಚ್ಚಿಸುವುದು, ರಿಸರ್ವ್ ಲೌಂಜ್ ಬದಲು ಒಂದು ಸ್ವಯಂಚಾಲಿತ ಟ್ರೇ ರಿಟ್ರೀವಲ್ ಸಿಸ್ಟಂ ಯಂತ್ರ ಮತ್ತು ಎರಡು ಎಕ್ಸ್-ರೇ ಯಂತ್ರಗಳ ಅಳವಡಿಕೆ ಮತ್ತು ಗೇಟ್ 1ಎ ಮತ್ತು ಗೇಟ್ 8ಬಿ ಪ್ರಯಾಣಿಕರ ಬಳಕೆಗೆ ಬಳಸುವ ಕುರಿತು ಪ್ರಸ್ತಾಪಿಸಲಾಗಿದೆ.
ದೇಶದ ಅತ್ಯಂತ ದೊಡ್ಡ ವಿಮಾನ ನಿಲ್ದಾಣವಾಗಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂರು ಟರ್ಮಿನಲ್ಗಳನ್ನು ಹೊಂದಿದೆ. ಪ್ರತಿದಿನ 1.90 ಲಕ್ಷ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು ಬಳಸುತ್ತಾರೆ.