ಒಳ ಮೀಸಲಾತಿ ಹೋರಾಟಗಾರರ ಬಂಧನ; BJP ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್ಗಳಂತೆ ಕಾಣುವರೇ ಎಂದು ಪ್ರಶ್ನಿಸಿದ ಕಾಂಗ್ರೆಸ್
ಬೆಂಗಳೂರು, ಡಿ. 12: ‘ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ-ರಾಜಮರ್ಯಾದೆ. ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ-ರಾಜಮರ್ಯಾದೆ. ರೌಡಿಗಳಿಗೆ, ಕ್ರಿಮಿನಲ್ಗಳಿಗೆ-ರಾಜಮರ್ಯಾದೆ. ಆದರೆ, ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ-ಲಾಠಿ ಏಟು, ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್ಗಳಂತೆ ಕಾಣುವರೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ ಬಿಜೆಪಿ ಸರಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ. ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ’ ಎಂದು ಟೀಕಿಸಿದೆ.
‘ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ-ಕೋಟಿ ರೂ.ಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು ಅಕ್ಷರಶಃ ದರೋಡೆಕೋರಂತೆ ಜನರ ಲೂಟಿಗೆ ಇಳಿದಿದ್ದಾರೆ. ಶೇ.40ರಷ್ಟು ಸರಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಯಾಣಿಕರಿಗೆ ತೊಂದರೆ ಕೊಡುವ ನರಕದ ದಾರಿಗಳಾಗಿವೆ! ಡಬಲ್ ಇಂಜಿನ್ ಸರಕಾರವಿದ್ದರೂ, 25 ಬಿಜೆಪಿ ಸಂಸದರಿದ್ದರೂ ಅನುದಾನವಿಲ್ಲ, ಕಾಮಗಾರಿಗಳ ಪ್ರಗತಿ ಇಲ್ಲದಿರುವುದು ಬಿಜೆಪಿ ಸರ್ಕಾರಗಳ ನಿಷ್ಕ್ರಿಯತೆಗೆ ಹಿಡಿದ ಕನ್ನಡಿ. ಡಬಲ್ ಇಂಜಿನ್ ಸರಕಾರವಲ್ಲ ಇದು ಟ್ರಬಲ್ ಇಂಜಿನ್ ಸರಕಾರ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'@BJP4Karnataka ಸರ್ಕಾರದಲ್ಲಿ
— Karnataka Congress (@INCKarnataka) December 12, 2022
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ - ರಾಜಮರ್ಯಾದೆ
ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ - ರಾಜಮರ್ಯಾದೆ
ರೌಡಿಗಳಿಗೆ, ಕ್ರಿಮಿನಲ್ಗಳಿಗೆ - ರಾಜಮರ್ಯಾದೆ
ಆದರೆ
ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ - ಲಾಠಿಏಟು
ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್ಗಳಂತೆ ಕಾಣುವರೇ?