ಮಂಗಳೂರು: ಅಪಘಾತಗಳಲ್ಲಿ ಮೃತಪಟ್ಟ ಇಬ್ಬರ ಅಂಗಾಂಗಗಳ ದಾನ

ಮಂಗಳೂರು, ಡಿ.12: ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟ ಇಬ್ಬರ ಅಂಗಾಂಗಗಳ ದಾನವು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಮೂಲಕ ಸೋಮವಾರ ನಡೆದಿದೆ.
ಇಬ್ಬರ ಅಂಗಾಂಗ ದಾನದಿಂದಾಗಿ 11 ಮಂದಿಗೆ ಜೀವದಾನ ದೊರೆತಂತಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಉರ್ವ ನಿವಾಸಿ ನೀಲ್ (39) ಡಿ.3ರಂದು ಉಪ್ಪಳದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರ ಗಾಯಗೊಂಡಿ ದ್ದರು. ಡಿ.9ರಂದು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.
ನೀಲ್ ಅವರ ಅಂಗಾಂಗ ದಾನಕ್ಕೆ ಪೋಷಕರು ನಿರ್ಧರಿಸಿದಂತೆ ಒಂದು ಕಿಡ್ನಿಯನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು-ಆಸ್ಪತ್ರೆಗೆ, ಇನ್ನೊಂದು ಕಿಡ್ನಿಯನ್ನು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ, ಲಿವರ್ ಮತ್ತು ಕಾರ್ನಿಯಾವನ್ನು ಮಂಗಳೂರಿನ ಯುಎಂಸಿಗೆ ರವಾನಿಸಲಾಗಿದೆ.
ಮೂಡಿಗೆರೆಯ ಧನ್ಯ ಕುಮಾರ್ (37) ಡಿ.8ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಬ್ಬೇನಹಳ್ಳಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕ್ಯಾಂಟರ್‌ವೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಡಿ.9ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅವರ ಪೋಷಕರು ಅಂಗಾಂಗ ದಾನಕ್ಕೆ ನಿರ್ಧರಿಸಿದರು. ಅದರಂತೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ಲಿವರ್‌ನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ, ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಕಿಡ್ನಿಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ, ಕಾರ್ನಿಯಾಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ, ಚರ್ಮವನ್ನು ಮಣಿಪಾಲ ಕೆಎಂಸಿಯ ಸ್ಕಿನ್ ಬ್ಯಾಂಕ್‌ಗೆ ರವಾನಿಸಿದರು.