ಮಂಗಳೂರು: ನೋಟಿನ ಬಂಡಲ್ ಪತ್ತೆ ಪ್ರಕರಣ; ಪೊಲೀಸ್ ಠಾಣೆಗೆ ವಾರಸುದಾರ ಹಾಜರು ?

ಮಂಗಳೂರು, ಡಿ.12: ನಗರದ ಪಂಪ್ವೆಲ್ನಲ್ಲಿ ಪತ್ತೆಯಾಗಿದ್ದ ನೋಟುಗಳ ವಾರಸುದಾರ ಎನ್ನಲಾದ ವ್ಯಕ್ತಿಯೋರ್ವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದೆ. ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ನ.26ರಂದು ಶಿವರಾಜ್ ಮತ್ತು ತುಕಾರಾಮ್ ಎಂಬವರಿಗೆ ಪಂಪ್ವೆಲ್ ಬಸ್ ನಿಲ್ದಾಣದ ಬಳಿ ನೋಟಿನ ಬಂಡಲ್ಗಳು ಸಿಕ್ಕಿದ್ದವು. ಶಿವರಾಜ್ ಬಳಿ ಇದ್ದ 49,000 ರೂ.ಗಳನ್ನು ಪೊಲಿಸರು ವಶಪಡಿಸಿಕೊಂಡಿದ್ದರು. ತುಕಾರಾಮ್ ಬಳಿ ಇದ್ದ 2.99 ಲ.ರೂ.ಗಳನ್ನು ಅವರ ಮನೆಯವರು ಪೊಲೀಸರಿಗೆ ತಂದು ಒಪ್ಪಿಸಿದ್ದರು. ಆದರೆ ಹಣದ ಮೂಲ ಪತ್ತೆಯಾಗಿರಲಿಲ್ಲ. ಬಂಡಲ್ಗಳಲ್ಲಿ ಒಟ್ಟು ಎಷ್ಟು ಹಣವಿತ್ತು ಎಂಬುದೂ ಗೊತ್ತಾಗಿರಲಿಲ್ಲ. ಇದೀಗ ವ್ಯಕ್ತಿಯೊಬ್ಬರು ಠಾಣೆಗೆ ತೆರಳಿ ತಾನೇ ಆ ಹಣದ ವಾರಸುದಾರ ಎಂದು ಹೇಳಿಕೊಂಡಿದ್ದು, ಪ್ರಕರಣ ವಿಚಿತ್ರ ತಿರುವು ಪಡೆದಿದೆ.