ಬೈಕಂಪಾಡಿ: ಪ್ಯಾಕ್ ಮಾಡಲ್ಪಟ್ಟ ಮೀನು ಕಳವು; ದೂರು ದಾಖಲು

ಮಂಗಳೂರು, ಡಿ.12: ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಫಿಶ್‌ಮಿಲ್ ದಾಸ್ತಾನು ಘಟಕದಿಂದ ಪ್ಯಾಕ್ ಮಾಡಲ್ಪಟ್ಟ 21 ಲಕ್ಷ ರೂ. ಮೌಲ್ಯದ ಮೀನು ಕಳವಾದ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕಂಪಾಡಿಯ ಫ್ಯಾಕ್ಟರಿಯಲ್ಲಿ ಪಿಶ್‌ಮೀಲ್ ತಯಾರಿಸಿ 50 ಕೆ.ಜಿ. ತೂಕದ ಬ್ಯಾಗ್‌ಗಳಲ್ಲಿ ಪ್ಯಾಕ್ ಮಾಡಿ, ಗೋದಾಮಿನಲ್ಲಿ ದಾಸ್ತಾನು ಮಾಡಿಕೊಂಡು ಬರಲಾಗುತ್ತಿದ್ದು, ಬೇಡಿಕೆ ಬಂದಂತೆ ಹಾಗೆ ಈ ಪ್ಯಾಕ್‌ನ್ನು ಹೊರದೇಶಕ್ಕೆ ರಪ್ಪು ಮಾಡಲಾಗುತ್ತದೆ. ಫ್ಯಾಕ್ಟರಿಯ ಮ್ಯಾನೇಜರ್ ಇಸಾಕ್ ಮತ್ತು ಸೂಪರ್ ವೈಸರ್ ಇರ್ಫಾನ್ ಈ ಗೋದಾಮಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ವಾರಕ್ಕೆ 2-3 ದಿನಗಳಲ್ಲಿ ಗೋದಾಮಿಗೆ ತೆರಳಿ ಪರಿಶೀಲಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿ.9ರಂದು ಮ್ಯಾನೇಜರ್ ಇಸಾಕ್ ಅವರನ್ನು ಗೋವಾದಲ್ಲಿರುವ ಇನ್ನೊಂದು ಫ್ಯಾಕ್ಟರಿಗೆ ಕೆಲಸದ ಮೇಲೆ ಕಳುಹಿಸಲಾಗಿತ್ತು. ಅದನ್ನು ತಿಳಿದುಕೊಂಡ ಇನ್ನೊಬ್ಬ ಸೂಪರ್‌ವೈಸರ್ ಇರ್ಫಾನ್ ಡಿ.10ರಂದು ಬೆಳಗ್ಗೆ 12ಕ್ಕೆ ಗೋದಾಮಿನಲ್ಲಿದ್ದ ಫಿಶ್‌ಮೀಲ್ ತುಂಬಿರುವ ಬ್ಯಾಗ್‌ಗಳನ್ನು ಪ್ಯಾಕ್ಟರಿಗೆ ತಿಳಿಸದೆ ಲಾರಿಯೊಂದನ್ನು ತರಿಸಿಕೊಂಡು ಆ ಲಾರಿಗೆ ಲೋಡನ್ನು ಮಾಡಿಕೊಂಡು ಹೋಗಿದ್ದಾನೆ. ಡಿ.10ರಂದು ರಾತ್ರಿ 9ಕ್ಕೆ ಮಾಹಿತಿ ತಿಳಿದು ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ತಲಾ 50 ಕೆ.ಜಿ. ತೂಕದ 400 ಚೀಲ ಫಿಶ್‌ಮೀಲ್‌ನ ಬ್ಯಾಗ್‌ಗಳನ್ನು ಕಳವಾಗಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕೆಲಸಗಾರರಲ್ಲಿ ವಿಚಾರಿಸಿದಾಗ ಗೋದಾಮಿನ ಸೂಪರ್ ವೈಸರ್ ಇರ್ಪಾನ್ ತನ್ನ ಬಳಿಯಿದ್ದ ಗೋದಾಮಿನ ಬೀಗದ ಕೀಯನ್ನು ಬಳಸಿ ಇತರರೊಂದಿಗೆ ಸೇರಿಕೊಂಡು ಕಳವು ಮಾಡಿಕೊಂಡು ಹೋಗಿರುವುದು ದೂರಲಾಗಿದೆ.