ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಗಳಲ್ಲಿ ಖಾಲಿ ಬಿದ್ದಿರುವ 11,000ಕ್ಕೂ ಅಧಿಕ ಬೋಧಕ ಹುದ್ದೆಗಳು
![ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಗಳಲ್ಲಿ ಖಾಲಿ ಬಿದ್ದಿರುವ 11,000ಕ್ಕೂ ಅಧಿಕ ಬೋಧಕ ಹುದ್ದೆಗಳು ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಗಳಲ್ಲಿ ಖಾಲಿ ಬಿದ್ದಿರುವ 11,000ಕ್ಕೂ ಅಧಿಕ ಬೋಧಕ ಹುದ್ದೆಗಳು](https://www.varthabharati.in/sites/default/files/images/articles/2022/12/12/359895-1670867025.jpeg)
ಹೊಸದಿಲ್ಲಿ, ಡಿ. 12: ದೇಶಾದಾದ್ಯಂತ ಕೇಂದ್ರೀಯ ವಿಶ್ವವಿದ್ಯಾನಿಲಯ, ಐಐಟಿ (IIT)ಹಾಗೂ ಐಐಎಂ(IIM)ಗಳಲ್ಲಿ 11,000ಕ್ಕೂ ಅಧಿಕ ಬೋಧಕ ಹುದ್ದೆ ಖಾಲಿ ಬಿದ್ದಿವೆ ಎಂದು ಶಿಕ್ಷಣ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. ಲೋಕಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ಲಿಖಿತ ಪ್ರತಿಕ್ರಿಯೆಯಲ್ಲಿ ಈ ಅಂಕಿ-ಅಂಶವನ್ನು ಹಂಚಿಕೊಂಡರು.
45 ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ಮಂಜೂರಾದ 18,956 ಬೋಧಕ ಹುದ್ದೆಗಳಲ್ಲಿ ಒಟ್ಟು 6,180 ಪ್ರಾಧ್ಯಾಪಕ, ಸಹ ಪ್ರಾದ್ಯಾಪಕ ಹಾಗೂ ಸಹಾಯಕ ಪ್ರಾದ್ಯಾಪಕರ ಹುದ್ದೆಗಳು ಖಾಲಿ ಬಿದ್ದಿವೆ. ಅದೇ ರೀತಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿಗಳು)ಗಳಿಗೆ ಮಂಜೂರಾದ 11,170 ಬೋಧಕ ಹುದ್ದೆಗಳಲ್ಲಿ ಒಟ್ಟು 4,502 ಬೋಧಕ ಹುದ್ದೆಗಳು ಖಾಲಿ ಇವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂಗಳು)ಗಳಿಗೆ ಮಂಜೂರಾದ 1,566 ಬೋಧಕ ಹುದ್ದೆಗಳಲ್ಲಿ 493 ಹುದ್ದೆಗಳು ಖಾಲಿ ಬಿದ್ದಿವೆ.
‘‘ಖಾಲಿ ಹುದ್ದೆಗಳು ಸೃಷ್ಟಿಯಾಗುವುದು ಹಾಗೂ ಅವುಗಳನ್ನು ಭರ್ತಿ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಅವುಗಳನ್ನು ಆಯಾ ಕೇಂದ್ರ ಕಾಯ್ದೆ ಅಡಿಯಲ್ಲಿ ಸ್ಥಾಪಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಅವುಗಳ ಕಾಯ್ದೆ, ಸ್ಥಾನ-ಮಾನ, ನಿಯಮಗಳು ಹಾಗೂ ಯುಜಿಸಿಯ ನಿಯಮ ಅಥವಾ ಮಾರ್ಗಸೂಚಿಗೆ ಅನುಗುಣವಾಗಿ ಅವುಗಳ ಶಾಸನಾತ್ಮಕ ಸಂಸ್ಥೆ ರೂಪಿಸುತ್ತದೆ’’ ಎಂದು ಪ್ರಧಾನ್ ಹೇಳಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಸಮರೋಪಾದಿಯಲ್ಲಿ ಭರ್ತಿ ಮಾಡುವಂತೆ ತಾನು ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದ್ದೇನೆ ಎಂದು ಪ್ರಧಾನ್ ಅವರು ತಿಳಿಸಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಹಾಗೂ ಐಐಎಂಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 961 ಪರಿಶಿಷ್ಟ ಜಾತಿ, 578 ಪರಿಶಿಷ್ಟ ಪಂಗಡ, 1,657 ಇತರ ಹಿಂದುಳಿದ ವರ್ಗ, 643 ಆರ್ಥಿಕ ದುರ್ಬಲ ವರ್ಗ ಹಾಗೂ 301 ಪಿಡ ಬ್ಲ್ಯುಡಿ (ಅಂಗವಿಕಲ)ಗೆ ಮೀಸಲಿರಿಸಿದವು.