ಕಾಬೂಲ್: `ಚೈನೀಸ್ ಹೋಟೆಲ್'ನಲ್ಲಿ ಸ್ಫೋಟ; ಗುಂಡಿನ ದಾಳಿ
![ಕಾಬೂಲ್: `ಚೈನೀಸ್ ಹೋಟೆಲ್ನಲ್ಲಿ ಸ್ಫೋಟ; ಗುಂಡಿನ ದಾಳಿ ಕಾಬೂಲ್: `ಚೈನೀಸ್ ಹೋಟೆಲ್ನಲ್ಲಿ ಸ್ಫೋಟ; ಗುಂಡಿನ ದಾಳಿ](https://www.varthabharati.in/sites/default/files/images/articles/2022/12/12/359897-1670867747.jpeg)
ಕಾಬೂಲ್, ಡಿ.12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್(Kabul)ನಲ್ಲಿ ಚೈನೀಸ್ ಹೋಟೆಲ್ ಎಂದೇ ಹೆಸರಾಗಿರುವ `ಶರೆ-ನವ್' (Share-Nav)ಹೋಟೆಲ್ನಲ್ಲಿ ಸೋಮವಾರ ಸ್ಫೋಟ ಹಾಗೂ ಬಳಿಕ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಸ್ಫೋಟ ಹಾಗೂ ದಾಳಿಯಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಕೃತ್ಯಕ್ಕೆ ಪಾಕಿಸ್ತಾನ ಬೆಂಬಲಿತ ಐಸಿಸ್ ಕಾರಣ. ಅಫ್ಘಾನಿಸ್ತಾನಕ್ಕೆ ಕೆಟ್ಟ ಹೆಸರು ತರುವ ಉದ್ದೇಶದ ಕೃತ್ಯವಿದು ಎಂದು ತಾಲಿಬಾನ್ ದೂಷಿಸಿದೆ.
ಈ ಹೋಟೆಲ್ನಲ್ಲಿ ವಿದೇಶಿ ರಾಜತಾಂತ್ರಿಕರು, ಉದ್ಯಮಿಗಳು ತಂಗುತ್ತಾರೆ. ಆದರೆ ಇಲ್ಲಿಗೆ ಹೆಚ್ಚಾಗಿ ಚೀನೀ ರಾಜತಾಂತ್ರಿಕರು ಮತ್ತು ಹೂಡಿಕೆದಾರರು ಭೇಟಿ ನೀಡುವುದರಿಂದ ಇದು `ಚೈನೀಸ್ ಹೋಟೆಲ್'(Chinese Hotel) ಎಂದೇ ಹೆಸರಾಗಿದೆ. ಭಾರೀ ಶಸ್ತ್ರಸಜ್ಜಿತ ತಂಡ ಸೋಮವಾರ ಹೋಟೆಲ್ ಮೇಲೆ ದಾಳಿ ನಡೆಸಿದ್ದು ಇದರಲ್ಲಿ ಆತ್ಮಹತ್ಯಾ ಬಾಂಬರ್ಗಳೂ ಇದ್ದರು. ಸ್ಫೋಟದಲ್ಲಿ ತಾಲಿಬಾನ್ ಯೋಧರೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನ ಬೆಂಬಲಿತ ಐಸಿಸ್ನಿಂದ ದಾಳಿ ಸಂಭವಿಸುವ ಸಾಧ್ಯತೆಯಿದೆ ಎಂಬ ಮಾಹಿತಿಯಿತ್ತು. ಆದ್ದರಿಂದ ಎಚ್ಚರಿಕೆಯ ಸಂದೇಶ ರವಾನಿಸಿದ್ದೆವು. ಅಫ್ಘಾನಿಸ್ತಾನಕ್ಕೆ ಕೆಟ್ಟ ಹೆಸರು ತಂದು ಮತ್ತೆ ಭಯೋತ್ಪಾದಕ ದೇಶವೆಂದು ಹಣೆಪಟ್ಟಿ ಕಟ್ಟಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ತಾಲಿಬಾನ್ ಮೂಲಗಳು ಹೇಳಿವೆ.
ಈ ಮಧ್ಯೆ, ಕಳೆದ ವಾರ ಕಾಬೂಲ್ನಲ್ಲಿನ ಪಾಕ್ ದೂತಾವಾಸದ ಆವರಣದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಅಫ್ಘಾನ್ನಲ್ಲಿನ ಪಾಕಿಸ್ತಾನದ ರಾಜತಾಂತ್ರಿಕ ಉಬೈದುರ್ ರಹ್ಮಾನ್ ನಿಝಾಮನಿಯವರ ಮೇಲೆ ಗುರುತಿಸಲಾಗದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು. ನಿಝಾಮನಿ ಗಾಯಗಳಿಲ್ಲದೆ ಪಾರಾದರೂ ಅವರ ಭದ್ರತಾ ಸಿಬಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಐಸಿಸ್-ಕೆ ಈ ದಾಳಿಯ ಹೊಣೆ ಹೊತ್ತಿದೆ.