ಅಂಬ್ಲಮೊಗರು | ಬೈಕ್ ಅಪಘಾತಕ್ಕೀಡಾಗಿ ವೈದ್ಯ ವಿದ್ಯಾರ್ಥಿ ಮೃತ್ಯು, ಸಹಸವಾರನಿಗೆ ಗಾಯ

ಕೊಣಾಜೆ: ಅಂಬ್ಲಮೊಗರು ಗ್ರಾಮದ ಮದಕದ ಬಳಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಬೈಕ್ ಅಪಘಾತ(Accident) ದಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ ವೈದ್ಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ಸಹ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿಯನ್ನು ಬೆಂಗಳೂರು ಯಶವಂತಪುರ ನಿವಾಸಿ ನಿಶಾಂತ್ (22) ಎಂದು ಗುರುತಿಸಲಾಗಿದೆ. ಬೈಕ್ ಸಹ ಸವಾರ ಬೀದರ್ ನಿವಾಸಿ ಶಕೀಬ್ ಎಂಬವರು ಅಪಘಾತದಲ್ಲಿ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಟೆಕಲ್ ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಕೂಡಾ ಎಂಬಿಬಿಎಸ್ ಪೂರೈಸಿ ಇಂಟರ್ನ್ ಶಿಪ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕುತ್ತಾರ್ ನಲ್ಲಿರುವ ಫ್ಲ್ಯಾಟ್ ಒಂದರಲ್ಲಿ ವಾಸಿಸುತ್ತಿದ್ದ ಇವರಿಬ್ಬರೂ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ಬೈಕ್ ರೈಡ್ ತೆರಳಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.
ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ, ಬೈಕ್ ಮೇಲಕ್ಕೆ ಹಾರಿ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪ್ರದೇಶ ಹಾಗೂ ತಡರಾತ್ರಿಯೂ ಆಗಿದ್ದರಿಂದ ಅಪಘಾತ ನಡೆದ ಕೆಲ ಹೊತ್ತಿನ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.