ಪುತ್ತೂರು ಸೀರತ್ ಕಮಿಟಿಯಿಂದ ಸರಕಾರಿ ಸವಲತ್ತುಗಳ ಮಾಹಿತಿ ಕಾರ್ಯಾಗಾರ

ಪುತ್ತೂರು, ಡಿ.13: ನರೇಗಾ ಸೇರಿದಂತೆ ಸರಕಾರದಿಂದ ಜನರಿಗಾಗಿ ಹಲವಾರು ಯೋಜನೆಗಳು ಲಭ್ಯವಿದ್ದು, ಇವುಗಳ ಬಗ್ಗೆ ನಿರಂತರವಾಗಿ ಇಂತಹ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜನೆ ಜನಸಾಮಾನ್ಯರಿಗೆ ಪ್ರಯೋಜನ ಪಡೆಯಲು ಸಹಕಾರಿ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯಕ್ತ ಗಿರೀಶ್ ನಂದನ್ ಹೇಳಿದ್ದಾರೆ.
ಪುತ್ತೂರು ಸೀರತ್ ಕಮಿಟಿಯ ವತಿಯಿಂದ ಪುತ್ತೂರಿನ ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ಮುಸ್ಲಿಮ್ ಜಮಾಅತಿನ ಪದಾಧಿಕಾರಿಗಳಿಗೆ ಮತ್ತು ಖತೀಬರುಗಳಿಗೆ ‘ಸರಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ’ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರವು ಹೊಸ ಹೊಸ ಯೋಜನೆಗಳನ್ನು ಜನರಿಗಾಗಿ ಜಾರಿಗೊಳಿಸುತ್ತಿದೆ. ಇದರ ಬಗ್ಗೆ ಎಲ್ಲರೂ ಮಾಹಿತಿ ಅರಿತುಕೊಳ್ಳುವುದು ಅವಶ್ಯಕವಾಗಿದೆ. ಅದಕ್ಕಾಗಿ ಇಂತಹ ಮಾಹಿತಿ ಶಿಬಿರಗಳು ಪೂರಕವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಗಳನ್ನು ಅಳವಡಿಸಿಕೊಂಡು ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಿದರು. ಪುತ್ತೂರು ತಾಲೂಕು ಸೀರತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಸುರಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕ ಗಣಪತಿ ಹೆಗ್ಡೆ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಪುತ್ತೂರಿನ ಮಾಹಿತಿ ಕೇಂದ್ರದ ಮುಖ್ಯಸ್ಥ ಮಹಮ್ಮದ್ ರಫೀಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತಮ್ಮ ಇಲಾಖೆಯಲ್ಲಿನ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಮುಹಮ್ಮದ್ ಹಾಜಿ ಕಲ್ಲೇಗ, ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಗೌರವಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಸೀರತ್ ಕಮಿಟಿ ಕೋಶಾಧಿಕಾರಿ ಎಲ್.ಟಿ.ರಝಾಕ್ ಹಾಜಿ, ಅಬ್ದುಲ್ಲಾ ಹಾಜಿ, ರಝಾಕ್ ಫೈಝಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ನೋಟರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಸೀರತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎ.ಶಕೂರ್ ಹಾಜಿ ಕಲ್ಲೇಗ ಸ್ವಾಗತಿಸಿದರು. ಇನ್ನೋರ್ವ ಕಾರ್ಯಕ್ರಮ ಸಂಯೋಜಕ ಡಾ. ಹಾಜಿ ಅಬೂಬಕರ್ ಆರ್ಲಪದವು ಕಾರ್ಯಕ್ರಮ ನಿರೂಪಿಸಿದರು.