ಪದವಿ ಪರೀಕ್ಷೆಯಾಗಿ 6 ತಿಂಗಳಾದರೂ ಬಾರದ ಫಲಿತಾಂಶ: ಡಿ.17ರಂದು ರಾಜ್ಯಾದ್ಯಂತ ಕಾಲೇಜು ಬಂದ್‌ಗೆ ಎನ್‌ಎಸ್‌ಯುಐ ಕರೆ

ಮಂಗಳೂರು, ಡಿ.13: ಪದವಿ ಪರೀಕ್ಷೆಗಳು ಮುಗಿದು ಸುಮಾರು ಆರು ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಆರೋಪಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ವತಿಯಿಂದ ಡಿ. 17ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪದವಿ ಪರೀಕ್ಷೆಗಳು ಮುಗಿದು 6 ರಿಂದ 8 ತಿಂಗಳು ಕಳೆದರೂ ಫಲಿತಾಂಶವನ್ನು ಪ್ರಕಟಿಸಲಾಗಿಲ್ಲ. ಇದರಿಂದ ಮುಂದಿನ ಸೆಮಿಸ್ಟರ್ ಓದಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ. 2022-23 ರ ಸಾಲಿನಲ್ಲಿ ಪ್ರಿ ಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ, ಎನ್ ಎಸ್.ಪಿ ವಿದ್ಯಾರ್ಥಿ ವೇತನಕ್ಕಾಗಿ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾರಿಗೂ ಪಾವತಿಯಾಗಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಏಕಾಏಕಿ ತಡೆಹಿಡಿದು ಕಾಲೇಜುನ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಿಸಿ ಬಸ್ ದರವನ್ನು ಏರಿಕೆ ಮಾಡಲಾಗಿದ್ದು ಇದರಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿ ತೊಂದರೆಯಾಗಿತ್ತಿದೆ.
ಕೇಂದ್ರ ಸರ್ಕಾರವು ಅವೈಜ್ಞಾನಿಕವಾಗಿ ನ್ಯಾಷನಲ್ ಎಜುಕೇಷನ್ ಪಾಲಿಸಿ ಪದವಿ ಕಾಲೇಜುಗಳಲ್ಲಿ ಅಳವಡಿ ಸಿದ್ದು, ಸಮಸ್ಯೆ ಬಗಹರಿಸುವಂತೆ ಸರಕಾರವನ್ನು ಆಗ್ರಹಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಿರಾಜ್, ನಿಖಿಲ್ ಪೂಜಾರಿ, ಆತುಫ್ ಉಪಸ್ಥಿತರಿದ್ದರು.