ವಿಕಲಚೇತನರ ಸಾಂಸ್ಕೃತಿಕ ಸ್ಪರ್ಧೆ ‘ಕಲಾ ಸೌರಭ’ ಉದ್ಘಾಟನೆ

ಉಡುಪಿ, ಡಿ.13: ಆಟಿಸಂ ಸೊಸೈಟಿ ಉಡುಪಿ, ಕಮಲಾ ಬಾಳಿಗಾ ಟ್ರಸ್ಟ್ ಮತ್ತು ಡಾ.ಎ.ವಿ.ಬಾಳಿಗಾ ಆಸ್ಪತ್ರೆ, ಡಿಸಬಿಲಿಟಿ ಎನ್‌ಜಿಓ ಅಲಯನ್ಸ್ ಬೆಂಗಳೂರು ಮತ್ತು ಜೆಸಿಐ ಉಡುಪಿ ಇಂದ್ರಾಳಿ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ವಿಶೇಷ ಚೇತನರ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ‘ಕಲಾ ಸೌರಭ’ ಕಾರ್ಯಕ್ರಮ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಮಂಗಳವಾರ ನಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ ಮಾತನಾಡಿ, ವಿಶೇಷ ಮಕ್ಕಳ ಪೋಷಕರು ಸಮಾಜದಲ್ಲಿ ಪಡುವ ಕಷ್ಟ ಹಾಗೂ ಸಮಸ್ಯೆಗಳಿಗೆ ನಾವೆಲ್ಲ ಜೊತೆಯಾಗಬೇಕು. ಸರಕಾರ ಮತ್ತು ಸಮಾಜ ಅವರಿಗೆ ಮನೋಸ್ಥೈರ್ಯ ಕೊಡುವ ಕೆಲಸ ಮಾಡಬೇಕಾಗಿದೆ. ವಿಶೇಷ ಚೇತನ ಮಕ್ಕಳು ಗೌರವಯುತ ಜೀವನ ನಡೆಸಲು ತಮ್ಮ ಕಾಲ ಮೇಲೆ ನಿಂತು ಸಮಾಜದ ಮುಖ್ಯವಾಹಿನಿಗೆ ಬರಲು ಬೇಕಾದ ತರಬೇತಿಯನ್ನು ಅವರಿಗೆ ನೀಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಕಲಚೇತನರಿಗೆ ಅನುಕಂಪದ ಬದಲು ಅವಕಾಶ ಮಾಡಿಕೊಡಬೇಕು. ಸರಕಾರ ವಿಶೇಷ ಮಕ್ಕಳು, ಶಾಲೆ ಮತ್ತು ಅದರ ಶಿಕ್ಷಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಸ್ಪರ್ಧೆಯನ್ನು ಕೆನರಾ ಬ್ಯಾಂಕ್ ಮುಖ್ಯ ಕಚೇರಿಯ ಮಹಾ ಪ್ರಬಂಧಕ ರಾಮ್ ನಾಯಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಜಯ್ ಶೆಟ್ಟಿ, ಉಡುಪಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ಸಮಾಜದ ಅಧ್ಯಕ್ಷೆ ಪದ್ಮ ಕಿಣಿ, ಆಟಿಸಂ ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ, ಪ್ರಸನ್ನ ಸ್ಕೂಲ್ ಆಫ್ ನರ್ಸಿಂಗ್‌ನ ಐಡಾ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉಸ್ತುವಾರಿ ಕೀರ್ತೇಶ್ ಎಸ್. ಸ್ವಾಗತಿಸಿದರು. ಸ್ಪರ್ಧೆಯಲ್ಲಿ ಜಿಲ್ಲೆಯ 14 ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿವಿಧ ಶಾಲೆಗಳ ವಿಶೇಷ ಮಕ್ಕಳೇ ತಯಾರಿಸಿದ ಕರಕುಶಲ ವಸ್ತುಗಳನ್ನು ಪ್ರದರ್ಶಿಸ ಲಾಯಿತು. ಕ್ಯಾಂಡಲ್, ಬ್ಯಾಗ್, ಆಲಂಕಾರಿಕ ವಸ್ತುಗಳು, ಯಕ್ಷಗಾನ ಕಿರೀಟದ ಸ್ಮರಣಿಕೆ, ಕಲಾಕೃತಿಗಳು, ಹೂವು, ಪಿನಾಯಿಲ್, ಕ್ಯಾರಿ ಬ್ಯಾಗ್, ಪೇಪರ್ ಬ್ಯಾಗ್‌ಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಇಡಲಾಗಿತ್ತು.