ಅಡ್ಡೂರು: ಶೌಚಾಲಯದ ಗುಂಡಿ ಅಗೆಯುವಾಗ ಮಣ್ಣು ಕುಸಿದು ಬಿದ್ದು ಓರ್ವ ಮೃತ್ಯು, ಇಬ್ಬರಿಗೆ ಗಾಯ

ಮಂಗಳೂರು, ಡಿ.13: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರಿನ ಅಳಕೆ ಎಂಬಲ್ಲಿನ ಮನೆಯೊಂದರ ಪಾಯಿಖಾನೆಗೆ ಗುಂಡಿ ತೋಡುವ ವೇಳೆ ಮಣ್ಣು ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸ್ಥಳೀಯರೇ ಆದ ಆದಂ (63) ಮೃತಪಟ್ಟ ಕಾರ್ಮಿಕರು. ಈ ದುರ್ಘಟನೆಯಲ್ಲಿ ಇಬ್ರಾಹೀಂ ಮತ್ತು ಇಮ್ತಿಯಾಝ್ ಎಂಬವರೂ ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೀಫ್ ಎಂಬವರಿಗೆ ಸೇರಿದ ಈ ಮನೆಯ ಪಾಯಿಖಾನೆಗೆ ಮಂಗಳವಾರ ಮೂವರು ಗುಂಡಿತೋಡುತ್ತಿದ್ದು, ಏಳೆಂಟು ಅಡಿ ಆಳ ತೋಡಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿಯಿತು ಎನ್ನಲಾಗಿದೆ. ಈ ಸಂದರ್ಭ ಆದಂ ಮಣ್ಣಿನಡಿಗೆ ಬಿದ್ದು ಮೃತಪಟ್ಟರೆ, ಇತರ ಇಬ್ಬರು ಕಾರ್ಮಿಕರಾದ ಇಬ್ರಾಹೀಂ ಮತ್ತು ಇಮ್ತಿಯಾಝ್ ಗಾಯಗೊಂಡಿದ್ದಾರೆ. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story