ಮಂಗಳೂರು: ಬಸ್ ಚಾಲಕ-ನಿರ್ವಾಹಕರಿಗೆ ಮಾರ್ಗದರ್ಶನ ಶಿಬಿರ

ಮಂಗಳೂರು, ಡಿ.13: ದ.ಕ. ಬಸ್ ಮಾಲಕರ ಸಂಘ ಮತ್ತು ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ಮಂಗಳವಾರ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್‌ನಲ್ಲಿ ಬಸ್ ಚಾಲಕ-ನಿರ್ವಾಹಕರಿಗೆ ಮಾರ್ಗದರ್ಶನ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ ಕೃಷ್ಣ ಭಟ್ ಬಸ್ ಚಾಲಕ -ನಿರ್ವಾಹಕರಿಗೆ ಸಂಚಾರ ನಿಯಮ ಪಾಲಿಸಲು ಮತ್ತು ದೈನಂದಿನ ಸರಿ-ತಪ್ಪುಗಳನ್ನು ತಿಳಿಸಿಕೊಡಲು, ಸಾರ್ವಜನಿಕರ ಜತೆ ವ್ಯವಹರಿಸಲು ಇಂತಹ ಶಿಬಿರಗಳ ಅಗತ್ಯವಿದೆ. ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿಚಾರಗಳನ್ನು ಪಾಲಿಸಿದರೆ ದೂರುಗಳು ಬರಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಅನಿವಾರ್ಯ. ಅದರೆ ಅದು ಸ್ನೇಹಮಯವಾಗಿರ ಬೇಕು. ಇನ್ನೊಬ್ಬರ ಜೀವ ತೆಗೆಯುವ ಹಂತಕ್ಕೆ ಸ್ಪರ್ಧೆ ಮಾಡಬಾರದು. ಜಿಲ್ಲೆಯಲ್ಲಿ ಲಕ್ಷಾಂತರ ವಾಹನಗಳಿವೆ. ಅದರಲ್ಲಿ ಬಸ್‌ಗಳು ಕೇವಲ ೨ ಸಾವಿರ ಮಾತ್ರವಿದೆ. ಅವಘಡಗಳು ಸಂಭವಿಸಿದಾಗ ಬಸ್ಸಿನವರ ತಪ್ಪು ಎಂದೇ ಬರುತ್ತದೆ. ಶತಮಾನದ ಇತಿಹಾಸವಿರುವ ಜಿಲ್ಲೆಯ ಖಾಸಗಿ ಬಸ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಮ್ಮೆ ಪಡುವಂತೆ ಕೆಲಸ ಮಾಡಬೇಕು ಎಂದು ಗೋಪಾಲಕೃಷ್ಣ ಭಟ್ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಕಾರ್ಯಾಗಾರ ಆಯೋಜಿಸುವಂತೆ ಜಿಲ್ಲಾಡಳಿತ, ಸಾರ್ವಜನಿಕರಿಂದ ಒತ್ತಡವಿತ್ತು. ಈ ಹಿಂದೆ ಚಾಲಕ-ನಿರ್ವಾಹಕರಿಗೆ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ ಕೋವಿಡ್‌ನಿಂದಾಗಿ ಕಾರ್ಯಾಗಾರ ನಡೆಸಲು ಸಾಧ್ಯವಾಗಿರಲಿಲ್ಲ. ಬಹುತೇಕ ಸಾರ್ವಜನಿಕರು ಸ್ವಂತ ವಾಹನಕ್ಕೆ ಮೊರೆ ಹೋಗಿರುವುದರಿಂದ ಉದ್ಯಮದ ಮೇಲೆ ಈಗಾಗಲೇ ಶೇ.20-25ರಷ್ಟು ಹೊಡೆತ ಬಿದ್ದಿದೆ. ಅವರನ್ನು ಮತ್ತೆ ಕರೆತರುವ ಜವಾಬ್ದಾರಿ ಚಾಲಕ-ನಿರ್ವಾಹಕರದ್ದಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ.ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಂಗಳೂರಿನ ಖಾಸಗಿ ಬಸ್ ವ್ಯವಸ್ಥೆ ಬಗ್ಗೆ ದೇಶದಲ್ಲೇ ಒಳ್ಳೆಯ ಅಭಿಪ್ರಾಯವಿದೆ. ವಿವಿಧೆಡೆಯಿಂದ ಅಧ್ಯಯನ ಉದ್ದೇಶಕ್ಕೆ ಇಲ್ಲಿಗೆ ಬರುತ್ತಾರೆ. ಜಿಲ್ಲೆಯ ಬಸ್ ಮಾಲಕರು ನೇರವಾಗಿ 10 ಸಾವಿರ ಮಂದಿಗೆ ಉದ್ಯೋಗ ನೀಡಿದ್ದಾರೆ. ಪ್ರಯಾಣಿಕರೇ ನಮ್ಮ ಅನ್ನದಾತರಾಗಿದ್ದು, ಅವರನ್ನು ಕಡೆಗಣಿಸಿದರೆ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಚಾಲಕರಿಗೆ ಸಮವಸ್ತ್ರ ಹಾಗೂ ನಿರ್ವಾಹಕರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ಕದ್ರಿ ಸಂಚಾರ ಠಾಣೆಯ ಎಸ್ಸೈ ವಿಜಯ್ ಕುಮಾರ್, ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟ ಅಧ್ಯಕ್ಷ ಅಶೋಕ್ ತಾವ್ರೊ, ದ.ಕ. ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ನೆಲ್ಸನ್ ಪಿರೇರಾ ಉಪಸ್ಥಿತರಿದ್ದರು.
ಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್ ವಂದಿಸಿದರು. ವಿ.ಜೆ.ಡಿಕ್ಸನ್ ಕಾರ್ಯಕ್ರಮ ನಿರೂಪಿಸಿದರು.