ಕೆಐಒಸಿಎಲ್‌ನಿಂದ ರಾಜ್ಯ ಮಟ್ಟದ ಚೆಸ್ ಪಂದ್ಯಾಟ: ವಿಜೇತರು

ಮಂಗಳೂರು, ಡಿ.13: ಕೆಐಓಸಿಎಲ್‌ನಿಂದ ಇತ್ತೀಚೆಗೆ ಆಯೋಜಿಸಲಾದ ೫ನೆ ‘ಕುದುರೆಮುಖ ಟ್ರೋಫಿ’ ರಾಜ್ಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಶ್ರೇಷ್ಠ ಆಟಗಾರ ಹಾಗೂ ಪಂದ್ಯದ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೋವಾದ ಋತ್ವಿಜ್ ಪರಾಬ್ ಪಡೆದಿದ್ದಾರೆ.
ರನ್ನರ್ ಅಪ್ ಆಗಿ ತಮಿಳುನಾಡಿನ ಮಣಿಗಂಡನ್ನ್ ಎಸ್. ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಕರ್ನಾಟಕದ ಧನುಷ್ ರಾಮ್ ಹೊರಹೊಮ್ಮಿದ್ದಾರೆ.
ಕಾವೂರು ಟೌನ್‌ಶಿಪ್‌ನ ನೆಹರೂ ಭವನದಲ್ಲಿ ನಡೆದ ಎರಡು ದಿನಗಳ ಪಂದ್ಯಾಟವನ್ನು ಶಾಸಕ ಭರತ್ ಶೆಟ್ಟಿ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಕೆಐಓಸಿಎಲ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಭಾಸ್ಕರ ರೆಡ್ಡಿ, ಉತ್ಪಾದನೆ ಮತ್ತು ಯೋಜನೆಗಳ ಮುಖ್ಯ ಪ್ರಧಾನ ವ್ಯವಸ್ಥಾಪಕ ಜಿವಿ ಕಿರಣ್, ಮುಖ್ಯ ಪ್ರದಾನ ವ್ಯವಸ್ಥಾಪಕ ರಾಮಕೃಷ್ಣ ರಾವ್ ಎಚ್., ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ಉಪಸ್ಥಿತರಿದ್ದರು.
ಕೆಐಓಸಿಎಲ್‌ನ ಸೀನಿಯರ್ ಮ್ಯಾನೇಜರ್ ಹಾಗೂ ಚೆಸ್ ಕಮಿಟಿ ಸಂಯೋಜಕ ಎಸ್. ಮುರುಗೇಶ್ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಆರ್ಬಿಟರ್ ಬಿ.ಎಚ್. ವಸಂತ್, ಡೆಪ್ಯುಟಿ ಆರ್ಬಿಟರ್ ಸಾಕ್ಷಾತ್, ಉಮಾನಾಥ್ ಕಾಪು, ಸೌಂದರ್ಯ, ಬಾಬು ಪೂಜಾರಿ, ನಯನ್ ಕಾರ್ಕಳ ಪಂದ್ಯಾಟವನ್ನು ನಿರ್ವಹಿಸಿದರು.
ಪಂದ್ಯಾಟದಲ್ಲಿ ತಮಿಳುನಾಡು, ಗೋವಾ, ಕರ್ನಾಟಕ, ಕೇರಳ, ರಾಜಸ್ತಾನ್, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ನಾಲ್ಕು ವರ್ಷದ ಬಾಲಕ ಹಾಗೂ ೮೩ ವರ್ಷದ ವೃದ್ದರು ಸೇರಿದಂತೆ ಒಟ್ಟು ೪೧೬ ಸ್ಪರ್ಧಿಗಳು ಭಾಗವಹಿಸಿದ್ದರು.
ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಒಟ್ಟು 184 ಟ್ರೋಫಿ ಹಾಗೂ ೩ ಲಕ್ಷ ರೂ. ಮೊತ್ತದ ನಗದು ಬಹುಮಾನವನ್ನು ವಿತರಿಸಲಾಯಿತು.