ಜಮೀನು ಸರ್ವೇಗೆ ವಿಳಂಬ ಮಾಡಿದ ತಹಶೀಲ್ದಾರ್ ಗೆ 3 ಲಕ್ಷ ರೂ.ದಂಡ
ಬೆಂಗಳೂರು, ಡಿ.13: ವೃದ್ಧೆಯೊಬ್ಬರಿಗೆ ಸೇರಿದ ಜಮೀನಿನ ಸರ್ವೇ ಮಾಡಿ ಪೋಡಿ, ದುರಸ್ತಿ ಮಾಡುವಂತೆ ಎಂಟು ವರ್ಷದ ಹಿಂದೆ ಹೊರಡಿಸಿದ ಆದೇಶವನ್ನು ಪಾಲಿಸದ ಮಂಡ್ಯ ಜಿಲ್ಲೆ ಪಾಂಡವಪುರದ ತಹಶೀಲ್ದಾರ್ ಗೆ ಮೂರು ಲಕ್ಷ ರೂ.ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಪಾರ್ವತಮ್ಮ(71) ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ. 2014ರ ಜು.24ರಿಂದ 2022ರ ಫೆ.10ರ ವರೆಗೆ ಪಾಂಡವಪುರ ತಾಲೂಕಿನ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಈ ದಂಡದ ಮೊತ್ತವನ್ನು ವಸೂಲು ಮಾಡಬೇಕೆಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಈ ವಿಚಾರವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು. ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಅರ್ಜಿದಾರರಿಗೆ ಪಾವತಿಸಬೇಕು. ಆ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು. ತಪ್ಪಿದರೆ ಜಿಲ್ಲಾಧಿಕಾರಿಯವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.
Next Story