‘ಒಳ ಮೀಸಲಾತಿ’ ಜಾರಿಗೊಳಿಸದಿದ್ದರೆ ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ: ದಂಡೋರ ಎಚ್ಚರಿಕೆ

ಬೆಂಗಳೂರು, ಡಿ.13: ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ನ್ಯಾ.ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳನ್ನು ಜಾರಿಗೊಳಿಸದಿದ್ದಲ್ಲಿ, ಡಿ.27ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಮುತ್ತಿಗೆ ಹಾಕುವುದು ಎಂದು ಮಾದಿಗ ದಂಡೋರ ಎಚ್ಚರಿಕೆ ನೀಡಿದೆ.
ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೊಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಂಡೋರ ಅಧ್ಯಕ್ಷ ಬಿ.ನರಸಪ್ಪ, ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವ ಕುರಿತು ಸರ್ವಪಕ್ಷಗಳ ಸಭೆ ನಡೆಸಲಾಗುತ್ತದೆ. ಶೀಘ್ರದಲ್ಲಿ ಸಂಪುಟ ಸಭೆಯಲ್ಲಿ ಚರ್ಚೆಗೆ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆಂದು ಜನಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಬಿಜೆಪಿ ಸರಕಾರ ಅದನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಒಳಮೀಸಲಾತಿಯನ್ನು ತರುವುದಾಗಿ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ, ಜಾರಿಗೊಳಿಸುವುದಿಲ್ಲ. ರಾಜಕೀಯ ಏಳಿಗೆಗಾಗಿ ಅದನ್ನು ಅಳವಡಿಸಿಕೊಂಡು ಅದನ್ನು ಮೂಲೆಗುಂಪಾಗಿ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ರಾಮಕೃಷ್ಣ, ಸುರೇಶ್, ರವೀಂದ್ರ ಸಿಂಹ ಮತ್ತಿತರರು ಉಪಸ್ಥಿತರಿದ್ದರು.





