ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪ: ಪ್ರಾಥಮಿಕ ಶಾಲಾ ಶಿಕ್ಷಕ ವಸಂತ ಶಿವಪ್ಪ ಸೇರಿ ಇಬ್ಬರ ಬಂಧನ
ಯಲ್ಲಾಪುರ: ತಾಲೂಕಿನ ಮಂಚಿಕೇರಿ ಮತ್ತು ಗುಳ್ಳಾಪುರ ಗ್ರಾಮಗಳೂ ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಜಿಲ್ಲೆಗಳ 18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪದಲ್ಲಿ ಇಬ್ಬರು ಅಂತರ ಜಿಲ್ಲಾ ಕಳವು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿ ನಗದು ಸೇರಿದಂತೆ 19.20 ಲಕ್ಷ ರೂ. ಮೌಲ್ಯದ ಸೊತ್ತ ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆಯ ರೆಟ್ಟೆಹಳ್ಳಿ ತಾಲೂಕಿನ ಲಿಂಗದೇವರಕೊಪ್ಪದ ಪ್ರಾಥಮಿಕ ಶಾಲಾ ಶಿಕ್ಷಕ ವಸಂತ ಶಿವಪ್ಪ ತಂಬಾಕದ (40) ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನ ಹಳ್ಳಿ ನಿವಾಸಿ ಚಾಲಕ ವೃತ್ತಿಯ ಸಲೀಂ ಜಮಾಲ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಇವರು 2022ರ ಜನವರಿ 18ರಂದು ತಾಲೂಕಿನ ಮಂಚಿಕೇರಿ ಗ್ರಾಮದ ಮಹಾಗಜಲಕ್ಷ್ಮಿ ದೇವಸ್ಥಾನದ ಬಾಗಿಲ ಬೀಗ ಮುರಿದು, ಕಾಣಿಕೆ ಹುಂಡಿ ಒಡೆದು 3000ರೂ ನಗದು, 10,000ರೂ ಮೌಲ್ಯದ ಹಿತ್ತಾಳೆ ಘಂಟೆಗಳು, 20,000ರೂ ಮೌಲ್ಯದ ತಾಮ್ರದ ಕಡಾಯಿ, 10,000 ರೂ ಮೌಲ್ಯದ ಸಿಸಿಟಿವಿ ಡಿವಿಆರ್ ಕಳವು ಮಾಡಿದ್ದರು. ಅದೇ ದಿನ ತಾಲೂಕಿನ ಗುಳ್ಳಾಪುರ ಗ್ರಾಮದ ಶಿವವ್ಯಾಘ್ರೇಶ್ವರ ದೇವಸ್ಥಾನದ ಬೀಗ ಮುರಿದು 13,500ರೂ ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದಿದ್ದರು. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಯಲ್ಲಾಪುರ ಪಿಐ ಸುರೇಶ್ ಯಳ್ಳೂರು ನೇತೃತ್ವದ ಪೊಲೀಸ್ ತಂಡ ಪ್ರಕರಣದ ಬೆನ್ನತ್ತಿ ಆರೋಪಿಗನ್ನು ಹಿಡಿದು ವಸ್ತುಗಳು, ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.