ಮಹಿಳಾ ಸುರಕ್ಷತೆ ಸಂದೇಶ: ಯುವತಿಯಿಂದ 20 ಸಾವಿರ ಕಿ.ಮಿ ಸೈಕಲ್ ಸವಾರಿ

ಭಟ್ಕಳ: ಭಾರತ ದೇಶದಲ್ಲಿ ಮಹಿಳೆ ಸುರಕ್ಷಿತಳಾಗಿದ್ದಾಳೆ ಎಂಬ ಸಂದೇಶ ಹೊತ್ತು ದೇಶದ 20 ಸಾವಿರ ಕಿ.ಮಿ/ ಉದ್ದಗಲಕ್ಕೂ ಸೈಕಲ್ ಸವಾರಿ ಮಾಡಿರುವ ಏಕಾಂಗಿ ಯುವತಿ ಮಧ್ಯಪ್ರದೇಶದ ಆಶಾ ಮಾಳವಿಯಾ ಮಂಗಳವಾರ ಭಟ್ಕಳ ತಲುಪಿದರು.
ಭಟ್ಕಳದಲ್ಲಿ ಆಶಾ ರನ್ನು ಬರಮಾಡಿಕೊಂಡ ತಹಶೀಲ್ದಾರ್ ಸುಮಂತ್ ಬಿ, ಗ್ರಾಮೀಣಠಾಣಾ ಪಿ.ಎಸ್.ಐ ಸುಮಾ ಬಿ, ಹಾಗೂ ತಾಲೂಕಾಡಳಿತ ಇವರ ಪ್ರಯಾಣದ ಸುರಕ್ಷತೆಯ ಕುರಿತು ಕಾಳಜಿ ವಹಿಸಿದರು.
ಮಧ್ಯಪ್ರದೇಶದ ರಾಜಗಢ ಜಿಲ್ಲೆಯವರಾದ ಆಶಾ ಮಾಳವಿಯಾ ಭಾರತ ಮಹಿಳೆಯರಿಗೆ ಸುರಕ್ಷಿತವಾಗಿದೆ ಎನ್ನುವ ಸಂದೇಶವನ್ನ ವಿಶ್ವಕ್ಕೆ ಸಾರುವ ನಿಟ್ಟಿನಲ್ಲಿ ಸಂಪೂರ್ಣ ಭಾರತ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾರೆ. ನವೆಂಬರ್ 1 ರಂದು ಮಧ್ಯಪ್ರದೇಶದ ಭೋಪಾಲ್‌ನಿಂದ ತಮ್ಮ ಯಾತ್ರೆಯನ್ನ ಆರಂಭಿಸಿದ್ದು, ಈಗಾಗಲೇ ಸುಮಾರು 3,700 ಕಿ.ಮೀ. ಸೈಕಲ್ ತುಳಿದು ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿದ್ದು ಕಾರವಾರದ ಮೂಲಕ ಭಟ್ಕಳ ತಲುಪಿದರು.
ಆಶಾ, ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ- ಕಾಲೇಜುಗಳಿಗೆ ಭೇಟಿ ನೀಡಿ, ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದು, ಮಹಿಳೆಯರ ರಕ್ಷಣೆಯ ಕಾಳಜಿಯನ್ನ ಭಾರತ ಹೊಂದಿದೆ ಎನ್ನುವ ಜಾಗೃತಿಯನ್ನ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾರ್ಗಮಧ್ಯೆ ಸಿಗುವ ಜನಸಾಮಾನ್ಯರಿಗೂ ಮಹಿಳೆಯರ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತಾ ಸೈಕಲ್ ಯಾತ್ರೆಯನ್ನು ಮುಂದುವರೆಸಿದ್ದಾರೆ.








