ಹಾಸನ | ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

ಹಾಸನ, ಡಿ.13: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಲವು ತಿಂಗಳ ನಂತರ ಬಾಲಕಿ ಗರ್ಭ ಧರಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸರು ಅದೇ ಗ್ರಾಮದ ಸ್ವಾಗತ್, ಸುದರ್ಶನ್ ಹಾಗೂ ಪಾಪಣ್ಣ ಎಂಬುವರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಬಾಲಕಿ ತನ್ನ ಪೋಷಕರಿಗೆ ಹೆದರಿ ವಿಷಯವನ್ನು ಬಹಿರಂಗಪಡಿಸಿಲ್ಲ. ಅಲ್ಲದೇ ದುಷ್ಕರ್ಮಿಗಳು ಸಂತ್ರಸ್ತೆ ಬಾಲಕಿಗೆ ಈ ವಿಷಯ ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿ ಕುಟುಂಬ ಕೆಲಸ ಮಾಡುತ್ತಿದ್ದ ಕಾಫಿ ಎಸ್ಟೇಟ್ ಮಾಲಕ ಸೇರಿದಂತೆ ಮೂವರು ಆಕೆಯ ಪೋಷಕರು ಹೊರಗೆ ಹೋದಾಗ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ತಿಳಿಸಿದ್ದಾರೆ.
'ಬಾಲಕಿಯ ಹೇಳಿಕೆ ಮೇರೆಗೆ ಈಗಾಗಲೇ ಇಬ್ಬರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ. ಸದ್ಯ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿರಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ'
ಹರಿರಾಮ್ ಶಂಕರ್ - ಪೊಲೀಸ್ ವರಿಷ್ಠಾಧಿಕಾರಿ