ಸರಕಾರದಿಂದ ದ.ಕ ಜಿಲ್ಲೆಯ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ : ಐವನ್ ಡಿ ಸೋಜ ಆರೋಪ

ಮಂಗಳೂರು, ಡಿ.13; ಜಿಲ್ಲೆಯ ಮೀನುಗಾರರನ್ನು ಮತ್ತು ಮೀನುಗಾರಿಕೆಯನ್ನು ಜಿಲ್ಲೆಯ ಸಚಿವರೇ ಖಾತೆ ಹೊಂದಿದ್ದರೂ ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಮಾಜಿ ಶಾಸಕ ಐವನ್ ಡಿ ಸೋಜ ಸುದ್ದಿ ಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
2009-10ನೇ ಸಾಲಿನಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಇದ್ದ ಒಟ್ಟು 1022 ಮತ್ತು ಟ್ರಾಲ್ ಬೋಟುಗಳ ಸಂಖ್ಯೆಗೆ ಅನುಗುಣವಾಗಿ 3ನೆ ಹಂತದ ಕಾಮಗಾರಿಯು ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾ ನದಡಿಯಲ್ಲಿ ರೂ.57.60 ಕೋಟಿಗಳಿಗೆ ಅನುಮೋದನೆ ಗೊಂಡಿರುತ್ತದೆ. ಯೋಜನೆಯು ಪ್ರಾರಂಭವಾದ ನಂತರ ಪ್ರಸಕ್ತ ಮೀನುಗಾರಿಕಾ ಚಟುವಟಿಕೆಗಳ ಬೇಡಿಕೆಗಳಂತೆ ಯೋಜನೆಯನ್ನು ಕೈಗೊಳ್ಳಲಾಗಿರುತ್ತದೆ. ಪ್ರಸಕ್ತ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ 1400ಕ್ಕೂ ಹೆಚ್ಚಿನ ಪರ್ಸಿನ್ ಮತ್ತು ಟ್ರಾಲ್ ಬೋಟುಗಳು ಇದ್ದು ಇಷ್ಟೊಂದು ಬೋಟುಗಳನ್ನು ಲಂಗರು ಹಾಕಲು ಜೆಟ್ಟಿ ಮತ್ತು ಪ್ರಸಕ್ತ ಮೀನುಗಾರಿಕಾ ಬಂದರಿಗೆ ಅಗತ್ಯವಿರುವ ಸೌಲಭ್ಯಗಳು ಇಲ್ಲದೆ ಇರುವುದರಿಂದ ಸಾಕಷ್ಟು ಸಮಸ್ಯೆ ಉಂಟಾಗಿರುತ್ತದೆ. ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ಮೀನುಗಾರಿಕಾ ಚಟುವಟಿಕೆಗೆ 3ನೇ ಹಂತದಲ್ಲಿ 2009-10ನೇ ಸಾಲಿನಲ್ಲಿ ಮಂಜೂರಾದ 450 ಮೀಟರ್ ಉದ್ದದ ಜೆಟ್ಟಿಗೆ ಬದಲಾಗಿ 800ಕ್ಕೂ ಹೆಚ್ಚಿನ ಉದ್ದದ ಜೆಟ್ಟಿಯ ಅಗತ್ಯ ವಿರುತ್ತದೆ ಎಂದು ಐವನ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಬಂದರಿನ 2009-10 ನೇ ಸಾಲಿನ ಅಗತ್ಯತೆಯಂತೆ ಅನುಮೋದನೆಗೊಂಡ ಯೋಜನೆ ಈವರೆಗೂ ಪೂರ್ಣಗೊಳಿಸದೇ ಇರುವುದರಿಂದ ಬಂದರಿನಲ್ಲಿ ಸಾಕಷ್ಟು ಜಾಗ ವ್ಯವಸ್ಥೆ ಇಲ್ಲದೇ ಸಮಸ್ಯೆ ಉಂಟಾಗಿರುತ್ತದೆ. ಆದುದರಿಂದ 3ನೇ ಹಂತವನ್ನು ಪೂರ್ಣ ಪ್ರಮಾಣದಲ್ಲಿ ಶೀಘ್ರ ಪೂರ್ಣಗೊಳಿಸಿ ಬಂದರಿನ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದು ತೀರಾ ಅಗತ್ಯವಿರುತ್ತದೆ. ಪ್ರಸಕ್ತ ಮಂಗಳೂರು ಮೀನುಗಾರಿಕಾ ಬಂದರಿನ ಮೀನುಗಾರಿಕಾ ಬೋಟುಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸ ಬೇಕಾಗಿರುತ್ತದೆ ಎಂದು ಐವನ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ, ಭಾಸ್ಕರರಾವ್, ಸಿ.ಎಂ.ಮುಸ್ತಾಫ,ಪದ್ಮ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.