ಉತ್ತರ ಕೊರಿಯಕ್ಕೆ 10.30 ಲಕ್ಷ ಡಾಲರ್ ಮೌಲ್ಯದ ಸ್ಟ್ರಾಬೆರಿ ಹಾಲು,ಕಾಫಿ ಮಾರಾಟ: ಸಿಂಗಾಪುರ ಪ್ರಜೆಗೆ ಜೈಲು ಶಿಕ್ಷೆ

ಸಿಂಗಾಪುರ,ಡಿ.13: ಸುಮಾರು 10 ದಶಲಕ್ಷ ಡಾಲರ್ ಮೌಲ್ಯದ ಸ್ಟ್ರಾಬೆರಿ ಸುವಾಸಿತ ಹಾಲು ಹಾಗೂ ಕಾಫಿಯನ್ನು ಉತ್ತರ ಕೊರಿಯಕ್ಕೆ ಮಾರಾಟ ಮಾಡಿದ ಆರೋಪದಲ್ಲಿ ಸಿಂಗಾಪುರದ ಪ್ರಜೆಯೊಬ್ಬನಿಗೆ ಸೋಮವಾರ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಿಂಗಾಪುರದ ಪಾನೀಯ ಉತ್ಪಾದಕ ಸಂಸ್ಥೆ ಪೊಕ್ಕಾ ಇಂಟರ್‌ನ್ಯಾಶನಲ್ ಸಂಸ್ಥೆಯ ಮಾಜಿ ಮ್ಯಾನೇಜರ್, 59 ವರ್ಷ ವಯಸ್ಸಿನ ಫುವಾ ಸೆಜೆ ಹೀ ಅವರಿಗೆ 5 ವಾರಗಳ ಜೈಲು ಶಿಕ್ಷೆ ವಿಧಿಸಿ ಸಿಂಗಾಪುರದ ನ್ಯಾಯಾಲಯ ತೀರ್ಪು ನೀಡಿದೆ. ಇದಕ್ಕೂ ಮುನ್ನ ಪುವಾ ಅವರು ತಪ್ಪೊಪ್ಪಿಕೊಂಡಿದ್ದು, ಶಿಕ್ಷೆಯಿಂದ ರಿಯಾಯಿತಿ ನೀಡುವಂತೆ ಕೋರಿದ್ದರು.
ಫುವಾ ಸೆಜೆ ಲೀ ಅವರು 2017ರಿಂದ 2018ರವರೆಗೆ ಸ್ಟ್ರಾಬೆರಿ ಸುವಾಸಿತ ಹಾಲು ಹಾಗೂ ಕಾಫಿ ಪಾನೀಯ ಸೇರಿದಂತೆ ಹಲವಾರು ಬೆವರೇಜ್‌ಗಳನ್ನು ಮಾರಾಟ ಮಾಡಿದ್ದರು. ಈ ಕಂಪೆನಿಗಳು ಅವುಗಳನ್ನು ಉತ್ತರ ಕೊರಿಯಕ್ಕೆ ರಫ್ತು ಮಾಡುತ್ತವೆಯೆಂಬ ವಿಷಯವೂ ಅವರಿಗೆ ತಿಳಿದಿತ್ತು ಎಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು.
ಆದರೆ ಈ ಮಾರಾಟದಿಂದ ಫುವಾ ಸೆಜೆ ಲೀ ಅವರಿಗೆ ಕಮೀಶನ್ ದೊರೆಯುತ್ತಿರಲಿಲ್ಲವದಾರೂ, ಅವರ ಮಾಸಿಕ ಮಾರಾಟದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಕೊರಿಯಕ್ಕೆ ಸರಕು ಸಾಮಾಗ್ರಿಗಳನ್ನು ರಫ್ತು ಮಾಡಿದಲ್ಲಿ ಸಿಂಗಾಪುರದಲ್ಲಿ 74 ಸಾವಿರ ಡಾಲರ್ ಅಥವಾ ಸರಕಿನ ವೌಲ್ಯದ ಮೂರು ಪಟ್ಟು ಅಧಿಕ ಮೊತ್ತವನ್ನು ದಂಡವಾಗಿ ವಿಧಿಸಬಹುದಾಗಿದೆ.
ತನ್ನ ಅಣ್ವಸ್ತ್ರ ಅಥವಾ ಪ್ರಕ್ಷೇಪಕ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮಗಳನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯದ ವಿರುದ್ಧ ವಿಶ್ವಸಂಸ್ಥೆಯ ಹಲವಾರು ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರ 2017ರಲ್ಲಿ ಉತ್ತರ ಕೊರಿಯದ ಜೊತೆ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಂಡಿತ್ತು.