ಖತರ್: ಫಿಫಾ ಪಂದ್ಯಕೂಟದಲ್ಲಿ ಇನ್ನೋರ್ವ ಪತ್ರಕರ್ತ ನಿಧನ

ಖತರ್,ಡಿ.12: ಫಿಫಾ ವಿಶ್ವಫುಟ್ಬಾಲ್ ಪಂದ್ಯಕೂಟ ನಡೆಯುತ್ತಿರುವ ಖತರ್ ನಲ್ಲಿ ಪತ್ರಕರ್ತ ಖಾಲಿದ್ ಅಲ್-ಮಿಸ್ಸಲಾಮ್ ಮೃತಪಟ್ಟಿದ್ದಾರೆ. ಅಲ್ ಕಾಸ್ ಟಿವಿಗಯ ಫೋಟೋಜರ್ನಲಿಸ್ಟ್ ಆಗಿ ಖಾಲಿದ್ ಕೆಲಸ ಮಾಡುತ್ತಿದ್ದರು. ಅವರು ರವಿವಾರ ಕೊನೆಯುಸಿರೆಳೆದಿರುವುದಾಗಿ ಖತರ್ ಅಧಿಕಾರಿಗಳು ತಿಳಿಸಿದ್ದಾರೆ. ಖಾಲಿದ್ ಅವರ ನಿಧನದ ಬಗ್ಗೆ ಯಾವುದೇ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲವೆಂದು ಅಲ್‌ಖಾಸ್ ಟಿವಿ ವರದಿ ಮಾಡಿದೆ. 2022ರ ಫಿಫಾ ವಿಶ್ವಕಪ್ ಪಂದ್ಯಕೂಟದ ವರದಿಗಾರಿಕೆಗೆ ಮಾಡುತ್ತಿದ್ದಾಗ ಅವರು ಹಠಾತ್ತನೆ ಸಾವನ್ನಪ್ಪಿದ್ದಾರೆಂದು ಗಲ್ಫ್‌ಟೈಮ್ಸ್ ಟ್ವೀಟ್ ಮಾಡಿದೆ.
ಕತರ್ ವಿಶ್ವಕಪ್ ಪಂದ್ಯಾವಳಿಯ ವರದಿಗಾರಿಕೆ ಮಾಡುತ್ತಿದ್ದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಹಲ್ ಸಾವನ್ನಪ್ಪಿದ ಕೇವಲ 48 ತಾಸುಗಳ ಬಳಿಕ ಖಾಲಿದ್ ಅಲ್ -ಮಿಸ್ಸಲಾಮ್ ಅವರ ಸಾವು ಸಂಭವಿಸಿದೆ. ಗ್ರಾಂಟ್ ವಾಹಲ್ ಅವರು ಶುಕ್ರವಾರ ಕತರ್‌ನ ಲೂಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಹಾಗೂ ನೆದರ್‌ಲ್ಯಾಂಡ್ಸ್ ನಡುವೆ ಕ್ವಾರ್ಟರ್ ಫೈನಲ್ ಪಂದ್ಯವನ್ನು ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಸಾವನ್ನಪ್ಪಿದ್ದರು. ಫಿಫಾ ಪಂದ್ಯಾವಳಿಯ ವರದಿಗಾರಿಕೆಯ ಸಂದರ್ಭ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ಬೆಂಬಲಿಸಿ ರೇನ್‌ಬೋ ಟೀಶರ್ಟ್ ಧರಿಸಿದ್ದಕ್ಕಾಗಿ ವಾಹಲ್ ಅವರನ್ನು ಖತರ್ ಪೊಲೀಸರು ಕೆಲವು ತಾಸುಗಳವರೆಗೆ ಬಂಧಿಸಿದ್ದರು.







