5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ; ಪುರಾತನ ಪದ್ಧತಿಗೆ ಮರಳಿದ ಶಿಕ್ಷಣ ವ್ಯವಸ್ಥೆ: ರೂಪ್ಸಾ ಖಂಡನೆ
ಬೆಂಗಳೂರು, ಡಿ.13: ಜಗತ್ತು ಪರೀಕ್ಷೆಗಳಿಂದ ದೂರ ಉಳಿದು, ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ರಾಜ್ಯ ಸರಕಾರ ಇಂತಹ ಸಂದರ್ಭದಲ್ಲಿ 5 ಮತ್ತು 8ನೆ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ನಡೆಸಲು ಮುಂದಾಗಿದೆ. ಸರಕಾರವು ‘ಪರೀಕ್ಷಾ ಪದ್ಧತಿ’ ಎಂಬ ಪುರಾತನ ಪದ್ಧತಿಗೆ ಮರಳುತ್ತಿರುವ ಉದ್ದೇಶವೇನು ಎಂದು ರೂಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನಿಸಿದ್ದಾರೆ.
ಮಂಗಳವಾರ ಈ ಕುರಿತು ಸಿಎಂಗೆ ಪತ್ರ ಬರೆದಿರುವ ಅವರು, ಶಿಕ್ಷಣ ಎಂಬುದು ಕಲಿಕೆಗಾಗಿ ಕಲಿಸುವುದೇ ವಿನಃ ಪರೀಕ್ಷೆಗಾಗಿ ಕಲಿಕೆ ಅಲ್ಲ. ಕೇಂದ್ರ ಹಾಗೂ ಇತರೆ ಪಠ್ಯಕ್ರಮ ಅನುಸರಿಸುವ ಶಾಲೆಗಳಲ್ಲಿ ಇಲ್ಲದ ಪರೀಕ್ಷಾ ಪದ್ಧತಿಯನ್ನು ಕೇವಲ ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳಿಗೆ ವಿಧಿಸಿದರೆ ಅಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ, ಅಘಾತ ಹಾಗೂ ಒತ್ತಡ, ಉಂಟಾಗಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳು ಆತ್ಮಹತ್ಯೆಗೆ ಯತ್ನಿಸಲೂಬಹುದು. ಇದರಿಂದ ಮಕ್ಕಳು ಶಾಲೆಗಳನ್ನು ಬಿಡುವಂತಹ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದು ರಾಜ್ಯದಲ್ಲಿ ಎರಡು ರೀತಿಯ ಶಿಕ್ಷಣ ಪದ್ಧತಿ ಕಾನೂನು ಬಾಹಿರವಾಗುತ್ತದೆ. ಎರಡು ವರ್ಷದಿಂದ ಕೋವಿಡ್ ಕಾರಣ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರತಿಲ್ಲ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಸರಿಯಾದ ಸಮಯದಲ್ಲಿ ಪುಸ್ತಕವನ್ನು ನೀಡಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಲಿಕೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಸುತ್ತೋಲೆಯಲ್ಲಿ ಆರ್‍ಟಿಇ ನಿಯಮವನ್ನು ಉಲ್ಲೇಖಿಸಿದ್ದಾರೆ. ಆದರೆ ಅದೇ ಆರ್‍ಟಿಇ ನಿಯಮದಲ್ಲಿರುವ ಶಿಕ್ಷಕರು, ಮೂಲಭೂತ ಸೌಕರ್ಯಗಳು, ಹಾಗೂ ಗುಣಮಟ್ಟದ ಶಿಕ್ಷಣ ವಿಚಾರವಾಗಿರುವ ನಿಯಮಗಳ ಕುರಿತು ಯೋಚಿಸುತ್ತಿಲ್ಲವೇಕೆ ಎಂದು ತಿಳಿಸಿದ ಅವರು, ಕೂಡಲೇ 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ನಿಲ್ಲಿಸಲು ಶಿಕ್ಷಣ ಸಚಿವರಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ಸ್ವಾಗತಾರ್ಹ: ಶಿಕ್ಷಣ ಹಕ್ಕು ಕಾಯ್ದೆ 2019ರ ತಿದ್ದುಪಡಿಯಂತೆ ಅನೇಕ ರಾಜ್ಯಗಳಲ್ಲಿ 5ನೆ ಮತ್ತು 8ನೆ ತರಗತಿಯ ಮೌಲ್ಯಾಂಕ(ಪಬ್ಲಿಕ್) ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಅದನ್ನು ಅನುಷ್ಟಾನ ಮಾಡಲು ಆಸಕ್ತಿ ತೋರುತ್ತಿರಲಿಲ್ಲ. ಈಗ ರಾಜ್ಯ ಸರಕಾರವು ಪಬ್ಲಿಕ್ ಪರೀಕೆ ಮಾಡಲು ಮುಂದಾಗಿರುವುದನ್ನು ಎಲ್ಲ ಶಿಕ್ಷಕರು, ಪೋಷಕರು ಸ್ವಾಗತಿಸುತ್ತಾರೆ. ಆದರೆ ಪ್ರಸಕ್ತ ವರ್ಷದಲ್ಲಿ ಪರೀಕ್ಷೆಗಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ಶಾಲೆಗಳಲ್ಲಿ ಇನ್ನು ಪಠ್ಯ ಪುಸ್ತಕಗಳ ಗೊಂದಲ ಇದೆ. ಹಾಗಾಗಿ ಮುಂದಿನ ವರ್ಷದಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಜಾರಿ ಮಾಡಬೇಕಾಗಿತ್ತು’
-ಡಿ.ಶಿವಕುಮಾರ್, ಅಸೋಸಿಯೇಟ್ ಮ್ಯಾನೇಜ್‍ಮೆಂಟ್ಸ್ ಆಫ್ ಪ್ರೈಮರಿ ಅಂಡ್ ಸೆಕಂಡರಿ ಸ್ಕೂಲ್ ಇನ್ ಕರ್ನಾಟಕದ ಕಾರ್ಯದರ್ಶಿ