ಪಶ್ಚಿಮದಂಡೆ: ಇಸ್ರೇಲಿ ಪಡೆಗಳ ಗುಂಡಿಗೆ ಫೆಲೆಸ್ತೀನ್ ಬಾಲಕಿ ಬಲಿ

ರಮಲ್ಲಾ,ಡಿ.13: ಪಶ್ಚಿಮದಂಡೆಯಲ್ಲಿ ಹದಿಹರೆಯದ ಫೆಲೆಸ್ತೀನಿ ಬಾಲಕಿಯನ್ನು ಇಸ್ರೇಲಿ ಸೈನಿಕರು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸಬೇಕೆಂದು ಪೆಲೆಸ್ತೀನ್ ಅಧಿಕಾರಿಗಳು ಸೋಮವಾರ ಕರೆ ನೀಡಿದ್ದಾರೆ.
ಜೆನಿನ್ ಪಟ್ಟಣದಲ್ಲಿರುವ ವಸತಿ ಪ್ರದೇಶವೊಂದರಲ್ಲಿ ಇಸ್ರೇಲಿ ಪಡೆಗಳು ಹಾಗೂ ಫೆಲೆಸ್ತೀನ್ ಹೋರಾಟಗಾರರ ನಡುವೆ ಗುಂಡಿನ ಕಾಳಗ ನಡೆದ ಬಳಿಕ 16 ವರ್ಷದ ಬಾಲಕಿ ಜಾನಾ ಝಕರ್‌ನೆಹ್ ಅವರ ಮೃತದೇಹ ರವಿವಾರ ರಾತ್ರಿ ಆಕೆಯ ಮನೆಯ ತಾರಸಿಯಲ್ಲಿ ಪತ್ತೆಯಾಗಿತ್ತು.
ಇಸ್ರೇಲ್ ಹದಿಹರೆಯದ ಬಾಲಕಿಯನ್ನು ನಿರ್ದವಾಗಿ ಹತ್ಯೆಗೈದಿದೆಯೆಂದು ಫೆಲೆಸ್ತೀನ್ ಪ್ರಧಾನಿ ಮೊಹಮ್ಮದ್ ಶತಾಯೆಹ್ ಆಪಾದಿಸಿದ್ದಾರೆ. ಈ ವರ್ಷ ಪಶ್ಚಿಮದಂಡೆ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಅತ್ಯಂತ ಕಿರಿಯ ವಯಸ್ಸಿನ ಬಾಲಕಿಯಾಗಿದ್ದಾಳೆ.
ತನಗೆ ಬೇಕಾದ ಫೆಲೆಸ್ತೀನ್ ಹೋರಾಟಗಾರರನ್ನು ಬಂಧಿಸಲು ಜೆನಿನ್ ಪ್ರದೇಶದ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿದಾಗ ಗುಂಡಿನ ಕಾಳಗ ಭುಗಿಲೆದ್ದಿತ್ತು ಎಂದು ವರದಿಯಾಗಿದೆ.
ಇಸ್ರೇಲ್ ಸೇನೆಯ ಹೊಂಚುಹಂತಕರು ಬಾಲಕಿಯ ಮನೆಯ ಸಮೀಪದ ಕಟ್ಟಡದಲ್ಲಿ ನಿಯೋಜಿತರಾಗಿದ್ದರು. ಅವರಲ್ಲಿ ಒಬ್ಬಾತ ಬಾಲಕಿಗೆ ಗುಂಡಿಕ್ಕಿದ್ದಾನೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಜಾನಾ ಮಜೀದಿ ಝಕರ್‌ನೆಹ್ ಈ ವರ್ಷದ ಆರಂಭದಿಂದೀಚೆಗೆ ಪಶ್ಚಿಮದಂಡೆಯಲ್ಲಿ ಇಸ್ರೇಲಿ ಪಡೆಗಳ ದಾಳಿಗೆ ಬಲಿಯಾದ 166ನೇ ಫೆಲೆಸ್ತೀನಿಯಳಾಗಿದ್ದಾಳೆ. ಸಶಸ್ತ್ರ ಇಸ್ರೇಲಿ ಸೈನಿಕರು ವಸತಿ ಪ್ರದೇಶ ಪ್ರವೇಶಿಸುತ್ತಿದ್ದಂತೆೆಯೇ ಗುಂಡೆಸೆಯತೊಡಗಿದರೆಂದು ಮೃತ ಬಾಲಕಿಯ ಚಿಕ್ಕಪ್ಪ ಯಾಸೆರ್ ಝಕಾರ್‌ನೆಹ್ ತಿಳಿಸಿದ್ದಾರೆ.
ಈ ಮಧ್ಯೆ ಇಸ್ರೇಲ್ ಸೇನೆ ಹೇಳಿಕೆಯೊಂದನ್ನು ನೀಡಿ, ತನ್ನ ಪಡೆಗಳು ಹಾರಿಸಿದ ಗುಂಡು ಪ್ರಮಾದವಶಾತ್ ಫೆಲೆಸ್ತೀನ್ ಬಾಲಕಿಗೆ ತಗಲಿ ಆಕೆ ಸಾವನ್ನಪ್ಪಿರುವ ಸಾಧ್ಯತೆಯಿದೆಯೆಂದು ತಿಳಿಸಿದೆ.







