ಸಜೀಪನಡು: ಮನೆಗೆ ನುಗ್ಗಿ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಭರಣ ಕಳವು

ಬಂಟ್ವಾಳ, ಡಿ.14: ಸಜೀಪನಡು ಗ್ರಾಮದ ನಿಶಾಭಾಗ್ ಮನೆಗೆ ನುಗ್ಗಿದ ಕಳ್ಳರು ಸುಮಾರು ಒಟ್ಟು 12.40 ಲಕ್ಷ ರೂ. ಮೌಲ್ಯದ ಚಿನ್ನಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಡಿ. 13ರಂದು ನಡೆದಿರುವುದಾಗಿ ವರದಿಯಾಗಿದೆ.
ನಿಶಾಭಾಗ್ ನಿವಾಸಿ, ಜಿ.ಪಂ.ಮಾಜಿ ಸದಸ್ಯ ಎಸ್.ಅಬ್ಬಾಸ್ ಅವರ ಮನೆಯಿಂದ ಕಳವು ನಡೆದಿದ್ದು, ಅವರ ಪುತ್ರ ಮೊಹಮ್ಮದ್ ನಜೀಬ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಮನೆಯವರು ಡಿ. 13ರಂದು ಮಧ್ಯಾಹ್ನ 2.30ರ ಸುಮಾರಿಗೆ ಅತ್ತೆ ಮನೆಗೆ ಹೋಗಿದ್ದು, ರಾತ್ರಿ 8.10ರ ಸುಮಾರಿಗೆ ಹಿಂದಿರುಗಿ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ನಜೀಬ್ ಅವರ ತಾಯಿ ಮಲಗುವ ಕೋಣೆಯಲ್ಲಿದ್ದ ಕಪಾಟಿನ ಸೇಫ್ ಲಾಕರನ್ನು ಆಯುಧದಿಂದ ಮೀಟಿ ಪರ್ಸ್ ನಲ್ಲಿದ್ದ 1.40 ಲಕ್ಷ ರೂ. ನಗದು, 3ಪವನ್ ತೂಕದ 3 ಕೈ ಬಳೆಗಳು, ತಲಾ ಒಂದು ಪವನ್ ತೂಕದ 3 ಉಂಗುರಗಳು, 7ಪವನ್ ತೂಕದ ಚಿನ್ನದ ಚೈನ್, ನಜೀಬ್ ಅವರ ಕೋಣೆಯ ಕಪಾಟಿನಲ್ಲಿದ್ದ ಸೇಫ್ ಲಾಕರ್ ಮುರಿದು 4 ಪವನ್ ತೂಕದ ಕೊರಳಿನ ಮಾಲೆ, 4 ಪವನ್ ತೂಕದ ಕೈ ಬಳೆ ಸಹಿತ ಇತರ ಚಿನ್ನಾಭರಣ ಸೇರಿ ಒಟ್ಟು 36ಪವನ್ ತೂಕದ ಚಿನ್ನಾಭರಣ ಕಳವು ನಡೆಸಿದ್ದಾರೆ.
ಕಳ್ಳರು ಮನೆಯ ಮೇಲಿನ ಮಹಡಿಯ ಹಿಂಬದಿಯ ಬಾಗಿಲನ್ನು ಮುರಿದು ಒಳ ನುಗ್ಗಿದ್ದು, ಕಳವಾದ ಚಿನ್ನದ ಮೌಲ್ಯದ 11 ಲಕ್ಷ ರೂ.,1.40 ಲಕ್ಷ ರೂ. ನಗದು ಸೇರಿ ಒಟ್ಟು 12.40 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.