ಭೀಕರ ಕಾರು ಅಪಘಾತ: ಗಂಭೀರವಾಗಿ ಗಾಯಗೊಂಡಿರುವ ಕ್ರಿಕೆಟಿಗ ಆ್ಯಂಡ್ರ್ಯೂ ಫ್ಲಿಂಟಾಫ್ ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ

ಲಂಡನ್: ಸರ್ರೆಯಲ್ಲಿ ಬಿಬಿಸಿ (BBC) ಸರಣಿಯ ಸಂಚಿಕೆಯೊಂದಕ್ಕೆ ಚಿತ್ರೀಕರಣ ನಡೆಯುವಾಗ ಭೀಕರ ಕಾರು ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಇಂಗ್ಲೆಂಡ್ (England) ಕ್ರಿಕೆಟ್ ತಂಡದ ಮಾಜಿ ನಾಯಕ ಆ್ಯಂಡ್ರ್ಯೂ ಫ್ಲಿಂಟಾಫ್ (Andrew Flintoff) ಅವರನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
ಹೀಗಿದ್ದೂ 45 ವರ್ಷದ ಆ್ಯಂಡ್ರ್ಯೂ ಫ್ಲಿಂಟಾಫ್‌ಗೆ ಆಗಿರುವ ಗಾಯಗಳು ಮಾರಣಾಂತಿಕವಾಗಿಲ್ಲ ಎಂದು ವರದಿಯಾಗಿದೆ.
(ಆ್ಯಂಡ್ರ್ಯೂ ಫ್ಲಿಂಟಾಫ್/ Photo credit:Twitter/@bbcpress )
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬಿಬಿಸಿ, "ಇಂದು ನಡೆದ ಟಾಪ್ ಗೇರ್ ಟೆಸ್ಟ್ ಟ್ರ್ಯಾಕ್ ರೇಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆ್ಯಂಡ್ರ್ಯೂ ಫ್ಲಿಂಟಾಪ್ ಗಾಯಗೊಂಡಿದ್ದು, ಸ್ಥಳದಲ್ಲಿಯೇ ಹಾಜರಿದ್ದ ವೈದ್ಯಕೀಯ ತಂಡ ಕೂಡಲೇ ನೆರವಿಗೆ ಧಾವಿಸಿತು" ಎಂದು ಹೇಳಿದೆ.
ಫ್ಲಿಂಟಾಫ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂದೆ ಈ ಕುರಿತು ಹೆಚ್ಚಿನ ವಿವರಗಳನ್ನು ದೃಢಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
2019ರಿಂದ ಈ ಪ್ರದರ್ಶನದ ಸಹ ನಿರೂಪಕರಾಗಿರಲ್ಲಿ ಒಬ್ಬರಾಗಿರುವ ಫ್ಲಿಂಟಾಫ್ ಎರಡನೆಯ ಬಾರಿಗೆ ಅಪಘಾತಕ್ಕೆ ಒಳಗಾಗಿದ್ದಾರೆ. 2019ರಲ್ಲಿ ತಮ್ಮ ಸಹ ನಿರೂಪಕರಾದ ಕ್ರಿಸ್ ಹ್ಯಾರಿಸ್ ಮತ್ತು ಪ್ಯಾಡಿ ಮ್ಯಾಕ್‌ಗಿನ್ನಿಸ್ ಅವರೊಂದಿಗೆ ಟೈಮ್ ಬ್ಯಾಂಡಿಟ್ ಎಂಬ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ಗಂಟೆಗೆ 124 ಮೈಲಿ ವೇಗದಲ್ಲಿ ಚಲಾಯಿಸುವಾಗ ಫ್ಲಿಂಟಾಫ್ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾಗಿದ್ದರು.
ಆ್ಯಂಡ್ರ್ಯೂ ಫ್ಲಿಂಟಾಫ್ 79 ಟೆಸ್ಟ್ ಪಂದ್ಯಗಳು ಹಾಗೂ 141 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಟವಾಡಿದ್ದು, 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಿಂದ ನಿವೃತ್ತಿಗೊಂಡಿದ್ದರು. 2005ರಲ್ಲಿ ಆಸ್ಟೇಲಿಯಾ ವಿರುದ್ಧ ನಡೆದಿದ್ದ ಆ್ಯಶಸ್ ಸರಣಿಯಲ್ಲಿ ಸರಣಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.
ಇದನ್ನೂ ಓದಿ: ಪದೇ ಪದೇ ಹೇಳಿ ಕಿರಿಕಿರಿ ಮಾಡಬೇಡಿ: ಬಿಲ್ಕಿಸ್ ಬಾನು ಪ್ರಕರಣದ ಶೀಘ್ರ ವಿಚಾರಣೆ ಮನವಿಗಳಿಗೆ ಸುಪ್ರೀಂ ಪ್ರತಿಕ್ರಿಯೆ