ಜನವರಿ 15ರಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ: ಸಿದ್ದರಾಮಯ್ಯ
ರಾಜ್ಯ ಪ್ರವಾಸಕ್ಕೆ 2 ಟೀಮ್...

ಬಾಗಲಕೋಟೆ, ಡಿ.14: 'ಜನವರಿ 15ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಬಳಿ ಎಸ್ ಆರ್ ಕೆ ಶುಗರ್ ಕಾರ್ಖಾನೆ ಯ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನವರಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ದಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತದೆ.ಈ ಸಂದರ್ಭದಲ್ಲಿ ಸರ್ಕಾರದ ಜನ ವಿರೋಧಿಯ ನೀತಿಗಳನ್ನು ಜನರಿಗೆ ಮಾಹಿತಿ ನೀಡಿ ಜಾಗೃತ ಮೂಡಿಸಲಾಗುವುದು.
'224 ಕ್ಷೇತ್ರದಲ್ಲಿ ಒಮ್ಮೆಲೇ ಸಂಚಾರ ಮಾಡಲು ಸಾಧ್ಯವಾಗುವುದಿಲ್ಲ.ಹೀಗಾಗಿ ಬೇರೆ ಬೇರೆ ತಂಡ ಮಾಡಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದ ಸಿದ್ದರಾಮಯ್ಯನವರು ,ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಾರೆ. ನಾನು ಮೈಸೂರು ಭಾಗದಲ್ಲಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.
ಗಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ರಾಜಕಾರಣಕ್ಕೊಸ್ಕರ ಮಹಾರಾಷ್ಟ್ರದವರು ಯಾವಾಗಲೂ ಕ್ಯಾತೆ ತೆಗೆಯುತ್ತಾರೆ.ಮಹಾಜನ ವರದಿ ಪ್ರಕಾರ,1962ರಲ್ಲಿ ಇದು ಇತ್ಯರ್ಥ ಆಗಿದೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಒಂದಿಂಚು ಕೂಡ ಬಿಟ್ಟು ಕೊಡಲ್ಲ. ನೆಲ ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅಮಿತ್ ಶಾ ಹೇಳಿದರೂ ಇಲ್ಲ, ನರೇಂದ್ರ ಮೋದಿ ಹೇಳಿದರೂ ಇಲ್ಲ ಎಂದ ಸಿದ್ದರಾಮಯ್ಯ, ಇಂತಹ ವಿಚಾರದಲ್ಲಿ, ಸರ್ಕಾರ ವೀಕ್ ಆಗಬಾರದು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪುಂಡಾಟಿಕೆ ಮಾಡಿದ್ರೆ, ಅದಕ್ಕೆ ಕ್ರಮ ತೆಗೆದುಕೊಳ್ಳಬೇಕು ,ಮಹಾರಾಷ್ಟ್ರದವರ ಪುಂಡಾಟಿಕೆಗೆಲ್ಲ ಹೆದರಿಕೊಳ್ಳುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.
'ಇದು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಕ್ರಮ ಏನೂ ಮಾಡ್ತಿಲ್ಲ. ಸಮಸ್ಯೆ ಕ್ರಿಯೆಟ್ ಮಾಡಬಾರದು, ಹೀಗಾಗಿ ಬೊಮ್ಮಾಯಿ ವೀಕ್ ಲೀಡರ್ ಆಗಿದ್ದಾರೆ' ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಹೈ ಕಮಾಂಡ್ ಗೆ ಬಿಟ್ಟ ವಿಚಾರ: ಹೈ ಕಮಾಂಡ್ ನನಗೆ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡುತ್ತೋ ಆ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ. ಅದು ಬಾದಾಮಿ ಆಗಲಿ, ಕೋಲಾರ ಆಗಲಿ,ವರುಣ, ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಹೇಳಿದರೆ, ಸ್ಪರ್ಧೆ ಮಾಡುತ್ತೇನೆ ಎಂದರು.