ವರದಕ್ಷಿಣೆ ಕಿರುಕುಳ ಆರೋಪ: ಸ್ಯಾಂಡಲ್ವುಡ್ ನಟಿ, ತಾಯಿಗೆ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್
ಬೆಂಗಳೂರು, ಡಿ.14: ತನ್ನ ಅಣ್ಣನ ಪತ್ನಿಗೆ ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆ 'ಅನುಭವ' ಚಿತ್ರದ ಖ್ಯಾತಿಯ ಸ್ಯಾಂಡಲ್ವುಡ್ ನಟಿ ಅಭಿನಯ ಹಾಗೂ ಅವರ ತಾಯಿ ಜಯಮ್ಮಗೆ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ (high court of karnataka) ಆದೇಶಿಸಿದೆ.
ಅಭಿನಯ ಅವರ ಅಣ್ಣ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣ ಸಂಬಂಧ ಆರೋಪಿಗಳನ್ನು ಖುಲಾಸೆಗೊಳಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮತ್ತು ದೂರುದಾರರಾದ ಲಕ್ಷ್ಮೀ ದೇವಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಏನು?: 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಲಕ್ಷ್ಮೀದೇವಿ ಎಂಬುವವರನ್ನು ವಿವಾಹವಾಗಿದ್ದು, ಮದುವೆ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ 80 ಸಾವಿರ ರೂ. ನಗದು, 250 ಗ್ರಾಂ ಚಿನ್ನಾಭರಣ ಪಡೆದಿದ್ದರು. ನಂತರವೂ 1 ಲಕ್ಷಕ್ಕೆ ಬೇಡಿಕೆ ಇಟ್ಟು 20 ಸಾವಿರ ಪಡೆದಿದ್ದರು. ಇದಾದ ಬಳಿಕ ವರದಕ್ಷಿಣೆ ಕಿರುಕುಳ ನೀಡಿ ಪೋಷಕರ ಮನೆಗೆ ಕಳುಹಿಸಿದ್ದರು. ಈ ಸಂಬಂಧ ಅಭಿನಯ ಸೇರಿ ಇಡೀ ಕುಟುಂಬದ ವಿರುದ್ಧ 2002 ರಲ್ಲಿ ಚಂದ್ರಾಲೇಔಟ್ ಠಾಣೆಗೆ ಲಕ್ಷ್ಮೀದೇವಿ ದೂರು ದಾಖಲಿಸಿದ್ದರು.
ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿ ಆದೇಶಿಸಿದೆ.
ಪ್ರಕರಣದ ಮೊದಲ ಆರೋಪಿ ಶ್ರೀನಿವಾಸ್ ಹಾಗೂ ಎರಡನೇ ಆರೋಪಿ ರಾಮಕೃಷ್ಣ ಸಾವನ್ನಪ್ಪಿರುವ ಹಿನ್ನೆಲೆ ಸದ್ಯ ಮೂವರಿಗೆ ಜೈಲು ಶಿಕ್ಷೆ ಪ್ರಕಟಿಸಿ ಆದೇಶಿಸಿದೆ. ಮೂರನೇ ಆರೋಪಿ ಜಯಮ್ಮಗೆ 5 ವರ್ಷ, ನಾಲ್ಕನೇ ಆರೋಪಿ ಚಲುವರಾಜುಗೆ ಮತ್ತು ಐದನೇ ಆರೋಪಿಯಾಗಿದ್ದ ಅಭಿನಯ ಅವರಿಗೆ 2 ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ.