ಸಿಆರ್ಝೆಡ್ ವಲಯದ ನೇತ್ರಾವತಿ, ಫಲ್ಗುಣಿ ನದಿತಟಗಳಲ್ಲಿ ಸಾಂಪ್ರದಾಯಿಕ ಮರಳು ತೆಗೆಯಲು ಅವಕಾಶ: ದ.ಕ. ಡಿಸಿ ರವಿಕುಮಾರ್

ಮಂಗಳೂರು, ಡಿ.14: ದ.ಕ.ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್ಝೆಡ್)ದ ನೇತ್ರಾವತಿ ಮತ್ತು ಫಲ್ಗುಣಿ ನದಿ ತಟಗಳಲ್ಲಿ ಸಾಂಪ್ರದಾಯಿಕ ಮರಳು ತೆಗೆಯುವ 202 ಮಂದಿಗೆ ಮಾನವ ಶ್ರಮದಿಂದ ಮರಳು ದಿಬ್ಬ ತೆರವು/ಸಾಗಾಟಕ್ಕೆ ಅವಕಾಶ ಕಲ್ಪಿಸಿ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶಿಸಿದ್ದಾರೆ.
ಈ ಹಿಂದೆ ರಾಜ್ಯ ಹೈಕೋರ್ಟ್ನಲ್ಲಿ ದಾಖಲಾಗಿದ್ದ ರಿಟ್ ಅರ್ಜಿಗೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಸುಪ್ರೀಂ ಕೋರ್ಟ್ನ ಚೆನ್ನೈಯ ರಾಷ್ಟ್ರೀಯ ಹಸಿರು ಪೀಠದಲ್ಲಿ ದಾಖಲಾಗಿರುವ ಅರ್ಜಿಯ ಆದೇಶವು ಉಡುಪಿ ಜಿಲ್ಲೆಗೆ ಸಂಬಂಧಪಟ್ಟದ್ದಾಗಿದೆ. ಹೈಕೋರ್ಟ್ ಆದೇಶ ಪಾಲನೆ ಮಾಡದೆ ಸರಕಾರಕ್ಕೆ ಮತ್ತು ಸಿಆರ್ಝೆಡ್ ಪ್ರಾಧಿಕಾರಕ್ಕೆ ಮಾರ್ಗದರ್ಶನ ಕೋರಿರುವುದರಿಂದ ನ್ಯಾಯಾಂಗ ನಿಂದನೆಯಾಗುವ ಸಂಭವವಿತ್ತು.
ದ.ಕ.ಜಿಲ್ಲಾಧಿಕಾರಿಯ ಆದೇಶ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್ಗಳನ್ನು ನ್ಯಾಯಾಲಯವು ವಜಾ ಮಾಡಿರುವುದರಿಂದ ಈ ಹಿಂದೆ ಮರಳು ತೆಗೆಯುತ್ತಿದ್ದ ಸಾಂಪ್ರದಾಯಿಕ ಮರಳು ತೆಗೆಯುವ 202 ಮಂದಿಯ ತಾತ್ಕಾಲಿಕ ಪರವನಗಿ ಹೊಂದಿದ್ದ ವ್ಯಕ್ತಿ/ಸಮುದಾಯದವರಿಗೆ ಮಾನವ ಶ್ರಮದಿಂದ ಮರಳು ದಿಬ್ಬ ತೆರವುಗೊಳಿಸಲು ಅನುಮತಿ ತಾನಾಗಿಯೇ ಮುಂದುವರೆದಿರುತ್ತದೆ.
ಹೈಕೋರ್ಟ್ ಆದೇಶದ ಅನ್ವಯ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧಿಕೃತ ಜ್ಞಾಪನಾ ಪತ್ರಗಳಲ್ಲಿ ಸೂಚಿಸಿರುವಂತೆ, ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯ ನೇತ್ರಾವತಿ ಮತ್ತು ಫಲ್ಗುಣಿ ನದಿ ಪಾತ್ರಗಳಲ್ಲಿ ಮರಳು ತೆಗೆಯಲು ಹಾಗೂ ಸಾಗಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ಆದೇಶದಂತೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು 202 ಮಂದಿ ಪರವಾನಗಿದಾರರಿಗೆ ಪ್ರತ್ಯೇಕವಾಗಿ ನೋಟಿಸ್ ನೀಡಲಿದ್ದಾರೆ. ಏಳು ಮಂದಿಯ ಸಮಿತಿಯು ಮರಳು ಪೂರೈಕೆಗೆ ಪರವಾನಗಿ ನೀಡಲಿದೆ. ಎಲ್ಲ ಪ್ರಕ್ರಿಯೆ ಮುಗಿದು ಮುಂದಿನ ವಾರ ಅಧಿಕೃತ ಮರಳು ಪೂರೈಕೆ ಆರಂಭವಾಗುವ ಸಾಧ್ಯತೆ ಇದೆ.