ಮಣಿಪಾಲ ಯೂನಿವರ್ಸಲ್ ಪ್ರೆಸ್‌ನಿಂದ ಬಹುಭಾಷಾ ಕವಿಗೋಷ್ಠಿ

ಮಣಿಪಾಲ, ಡಿ.14: ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ಜಯಂತಿ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಭಾರತೀಯ ಭಾಷಾಉತ್ಸವ್‌ದ ಅಂಗವಾಗಿ ಮಾಹೆಯ ಪ್ರಸಾರಾಂಗ ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನ ಆಯೋಜನೆಯಲ್ಲಿ ಬಹು ಭಾಷಾ ಕವಿಗೋಷ್ಠಿ ‘ಸುಮಧುರ ಭಾಷಿಣೀಂ’ಯನ್ನು ಸಂಸ್ಥೆಯ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಆಯೋಜಿಸಲಾಗಿತ್ತು.
ಈ ಕವಿಗೋಷ್ಠಿಯಲ್ಲಿ ಸುಜಯೀಂದ್ರ ಹಂದೆ ಕುಂದಗನ್ನಡವನ್ನು, ಅನುಬೆಳ್ಳೆ, ವಾಸಂತಿ ಅಂಬಲಪಾಡಿ, ಪೂರ್ಣಿಮಾ ಜನಾರ್ದನ್ ತುಳುವಿನ ವಿವಿಧ ಪ್ರಭೇದಗಳನ್ನು, ಯೂಕೂಬ್ ಖಾದರ್ ಬ್ಯಾರಿ ಭಾಷೆಯನ್ನು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೊಂಕಣಿಯನ್ನು, ಪಾಂಗಾಳ ಬಾಬು ಕೊರಗ ಕೊರಗ ಭಾಷೆಯನ್ನು, ಜಯದೇವ ಹಿರಣ್ಯ ಹವಿಗನ್ನಡವನ್ನು, ರುಚಾ ಸಹಸ್ರಬುಧೆ ಮರಾಠಿಭಾಷೆಯನ್ನು ಪ್ರತಿನಿಧಿಸಿ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಭಾಷೆಗೂ ಭಾವಕ್ಕೂ ಸಂಬಂಧವಿದ್ದು, ಶಾಬ್ದಿಕ ಭಾಷೆಯಲ್ಲಿ ಹೇಳಲಾಗದ ಭಾವ ಗಳನ್ನು ವ್ಯಕ್ತಪಡಿಸಲು ಕವಿತೆಗಳ ಮೊರೆ ಹೋಗುತ್ತೇವೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಾಹೆಯ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ರಾಹುಲ್ ಪುಟ್ಟಿ ಮಾತನಾಡಿ, ಭಾಷೆ ಎಂಬುದು ಕೇವಲ ಸಂವಹನ ಉಪಕರಣವಲ್ಲ. ಅದು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಮಾಧ್ಯಮವೂ ಹೌದು. ಸ್ಥಳೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಅಧ್ಯಯನ ಕೇಂದ್ರವನ್ನು ಮಾಹೆ ಅಭಿವೃದ್ಧಿ ಪಡಿಸುತ್ತಿದೆ ಎಂದರು.
ಮಣಿಪಾಲ ಯೂನಿವರ್ಸಲ್ ಪ್ರೆಸ್‌ನ ಪ್ರಧಾನ ಸಂಪಾದಕರಾದ ಡಾ. ನೀತಾ ಇನಾಂದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂಯುಪಿಯ ಮಾರ್ಕೆಂಟಿಗ್ ಅಸಿಸ್ಟೆಂಟ್ ಕಾವ್ಯ ಡಿ. ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು.







