ಮಾಜಿ ಶಾಸಕ ವೈಎಸ್‍ವಿ ದತ್ತ ಶೀಘ್ರವೇ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಡಿ. 14: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪರಮಾಪ್ತ ಹಾಗೂ ಪಕ್ಷದ ವಕ್ತಾರರೂ ಆಗಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದ್ದು, ಸೇರ್ಪಡೆ ದಿನಾಂಕ ನಿಗದಿಯಷ್ಟೇ ಬಾಕಿ ಇದೆ.
ಸುದೀರ್ಘ 50 ವರ್ಷಗಳ ಕಾಲ ದೇವೇಗೌಡರ ಜೊತೆ ರಾಜಕೀಯ ಒಡನಾಟವನ್ನು ಹೊಂದಿದ್ದ ವೈಎಸ್‍ವಿ ದತ್ತಾ ಅವರು, ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ರಾಜಕೀಯ ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆಂದು ಗೊತ್ತಾಗಿದೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ವೈಎಸ್‍ವಿ ದತ್ತ, ‘ಕಾಂಗ್ರೆಸ್ ಪಕ್ಷದ ಸೇರುವುದು ನಿಶ್ಚಿತ. ಆದರೆ, ಸೇರ್ಪಡೆ ದಿನಾಂಕ ಯಾವತ್ತು ಎಂದು ಇನ್ನೂ ನಿಗದಿಯಾಗಿಲ್ಲ. ಕ್ಷೇತ್ರದಲ್ಲಿನ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ನಾನು ಮುಂಬರುವ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿಲ್ಲ. ಜತೆಗೆ ಟಿಕೆಟ್ ನೀಡಬೇಕೆಂಬ ಷರತ್ತನ್ನು ವಿಧಿಸಿಲ್ಲ. ಕೋಮುವಾದಿ ಶಕ್ತಿಗಳನ್ನು ಮಣಿಸುವ ಉದ್ದೇಶದಿಂದ ಕಾಂಗ್ರೆಸ್ ಸೇರ್ಪಡೆಯಾಗಲು ಉದ್ದೇಶಿಸಿದ್ದೇನೆ. ನನಗೆ ಯಾವುದೇ ಜಾತಿ ಮತ್ತು ಹಣದ ಬೆಂಬಲ ಇಲ್ಲ. ಆದರೆ, ನನಗಿರುವ ಜನರ ಪ್ರೀತಿ ಮತ್ತು ಸಂಪರ್ಕವನ್ನು ಆಧರಿಸಿ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ವಿವರಣೆ ನೀಡಿದರು.
ಡಿ.17ಕ್ಕೆ ವೈಎಸ್‍ವಿ ದತ್ತಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಆಡಿಯೋ ವೈರಲ್ ಆಗಿದೆ. ಆದರೆ, ಅದೇ ದಿನ ಬೆಳ್ತಂಗಂಡಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದ್ದು, ಅದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೃತಿ ಬಿಡುಗಡೆಗೊಳಿಸಲಿದ್ದು, ನಾನು ಪುಸ್ತಕ ಕುರಿತು ಮಾತನಾಡುತ್ತೇನೆ. ಆಹ್ವಾನ ಪತ್ರಿಕೆಯಲ್ಲಿ ಇಬ್ಬರ ಹೆಸರು ಇರುವುದರಿಂದ ಪಕ್ಷ ಸೇರ್ಪಡೆಯಾಗಲಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿದೆ ಎಂದು ಅವರು ಸ್ಪಷ್ಟಪಡಿಸಿದರು.
‘ನನಗೆ ಯಾವುದೇ ಜಾತಿ, ಹಣ ಬೆಂಬಲವೂ ಇಲ್ಲ. ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕ್ಷೇತ್ರದಲ್ಲಿ ರಾಜಕೀಯ ಕಾರಣ ಹಾಗೂ ಕೋಮುವಾದಿ ಶಕ್ತಿಗಳನ್ನು ಮಣಿಸಲು ಕಾಂಗ್ರೆಸ್ ಸೇರ್ಪಡೆ ತೀರ್ಮಾನ ಮಾಡಿದ್ದೇನೆ’
-ವೈಎಸ್‍ವಿ ದತ್ತಾ ಮಾಜಿ ಶಾಸಕ







