ನಟರಾಜ್ ಹುಳಿಯಾರ್ ಸಂಪಾದಿತ ‘ಎಲ್ಲರ ಗಾಂಧೀಜಿ’ ಪುಸ್ತಕ ಬಿಡುಗಡೆ
ಬೆಂಗಳೂರು, ಡಿ.14: ಗಾಂಧಿಯು ಸಮಾಜ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆನೀಡಿದ್ದಾರೆ. ಎಲ್ಲರ ಗಾಂಧೀಜಿ ಪುಸ್ತಕವು ಪ್ರಸ್ತುತ ದಿನಗಳಲ್ಲಿ ಗಾಂಧಿಯ ಚಿಂತನೆ ವಿಚಾರಗಳನ್ನು ಪ್ರತಿನಿಧಿಸುತ್ತದೆ ಎಂದು ಖ್ಯಾತ ಲೇಖಕ ರಾಮಚಂದ್ರ ಗುಹಾ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ನ್ಯಾಷನಲ್ ಕಾಲೇಜಿನಲ್ಲಿ ನಡೆದ ನಟರಾಜ್ ಹುಳಿಯಾರ್ ಸಂಪಾದಿತ ಎಲ್ಲರ ಗಾಂಧೀಜಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀ ತಾವು ಸ್ಥಾಪಿಸಿದ ಯಂಗ್ ಇಂಡಿಯಾ, ನವಜೀವನ ಪತ್ರಿಕೆಗಳಲ್ಲಿ ಸ್ವತಂತ್ರ್ಯ ಹೋರಾಟ ಮತ್ತು ಸ್ವರಾಜ್ವದ ಕುರಿತು ಮೊದಲ ಬಾರಿಗೆ ಆರು ಸರಣಿ ಲೇಖನಗಳನ್ನು ಬರೆದಿದ್ದರು. ಅಂದಿನ ವಿವಿಧ ಮ್ಯಾಗಜೀನ್‍ಗಳು ಸುಮಾರು ನಾಲ್ಕು ಭಾಷೆಗಳಲ್ಲಿ ಅವರ ಲೇಖನವನ್ನು ಪ್ರಕಟಿಸಿದ್ದವು. ಲೇಖನದಿಂದ ದೇಶದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು ಎಂದ ಅವರು, ಗಾಂಧೀಜಿಯ ಬಾಲ್ಯ, ಮತ್ತು ವಿದ್ಯಾಭ್ಯಾಸದ ದಿನಗಳನ್ನು ಮೆಲುಕು ಹಾಕಿದರು.
ಚಲನಚಿತ್ರ ನಿರ್ದೇಶಕ ಎಂ.ಎಸ್ ಸತ್ಯು ಮಾತನಾಡಿ, ಕೋಲು ಹಿಡಿದಿರುವ ಗಾಂಧಿ ದೇಶಕ್ಕೆ ಸ್ವರಾಜ್ಯ ತರುತ್ತಾನೆಂದು ಸ್ವತಃ ಅಂದಿನ ಕಾಂಗ್ರೆಸ್ ಪಕ್ಷವೇ ನಂಬಿರಲಿಲ್ಲ. ಆದರೆ ಗಾಂಧಿಯ ದಿಟ್ಟ ಹೋರಾಟ, ಚಿಂತನೆಗಳುಫಲ ನೀಡಿತು ಎಂದ ಅವರು, ಇಂದಿನ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಇಲ್ಲವಾಗಿದ್ದಾರೆ. ಮಾಕ್ರ್ಸ್‍ವಾದ ಫೇಲ್ ಆಗಿದೆ ಎಂದರು.
ಗಾಂಧಿಯನ್ನು ಅನುಸರಿಸಿದ ನೆಲ್ಸನ್ ಮಂಡೇಲಾ ಅವರ ವಿಚಾರಗಳನ್ನು ಸ್ವದೇಶಕ್ಕೆ ಕೊಂಡೊಯ್ದರು. ಗಾಂಧಿ ಚಿಂತನೆ ದಕ್ಷಿಣಾ ಆಫ್ರಿಕಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯಿತು. ಇಂದು ನಾವು ಗಾಂಧಿಯ ಚಿಂತನೆಗಳನ್ನು ಅನುಸರಿಬೇಕಾದ ಸಂದರ್ಭ ಬಂದಿದೆ. ವರ್ತಮಾನ ದಿನಗಳಲ್ಲಿ ನಮಗೆ ಗಾಂಧಿ ಅಗತ್ಯವಿದೆ ಎಂದರು.
ಹಿಂದು ಧರ್ಮದ ಜಾತಿ ಪದ್ದತಿಯನ್ನು ಯಾಕೆ ಅಂಬೇಡ್ಕರ್ ಸಂವಿಧಾನದಲ್ಲಿ ಬರೆದರು ಎಂದರೆ, ಹಿಂದೂ ಧರ್ಮದಲ್ಲಿ ಶುದ್ಧಿ ಸಾಧ್ಯವಿಲ್ಲ. ನೀವು ಯಾವುದೇ ಜಾತಿಯಾದರೂ, ಎಷ್ಟೇ ಮುಂದುವರೆದರೂ ಜಾತಿ ಎನ್ನುವುದು ನಿಮಗೆ ಶಾಪವಾಗುತ್ತದೆ. ಕೊನೆಗೆ ಜಾತಿಯಲ್ಲೇ ಸಾಯಿತ್ತೀರಿ. ಆದ್ದರಿಂದಲೇ ಅಂಬೇಡ್ಕರ್ ಸಂವಿಧಾನದಲ್ಲಿ ಜಾತಿ ವಿಚಾರ ತಂದರು. ಜಾತಿ ಹಿಂದೂ ಧರ್ಮದ ಅಶುದ್ಧಿ ಎಂದು ಅರಿತ ಅವರೇ ಕೊನೆಗೆ ಧರ್ಮವನ್ನು ತ್ಯಜಿಸಿ ಬೌದ್ದ ಧರ್ಮಕ್ಕೆ ಹೋದರು. ಅಂತಹ ಶಾಪಗ್ರಸ್ಥ ಜಾತಿಯಿಂದಲೇ ಇಂದಿನ ಚುನಾವಣೆಗಳು ನಡೆದು ಜಾತಿಯ ರಾಜಕಾರಣವೂ ನಡೆಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೇಖಕ ನಟರಾಜ್ ಹುಳಿಯಾರ್ ಮಾತನಾಡಿ, ಗಾಂಧಿಯ ದಿಟ್ಟತನದ ಏಕಾಂಗಿ ನಡೆಯಿಂದ ಅವರ ಹೋರಾಟಕ್ಕೆ ದೇಶವೇ ಓಗುಟ್ಟಿತು. ಅಂತೆಯೇ ನಾವೂ ಬರಹಗಾರರು, ಚಿಂತಕರು ಕೆಲವವನ್ನು ಏಕಾಂಗಿಯಾಗಿಯೇ ಆರಂಭಿಸಿದರೆ ಜಗತ್ತು ಜೊತೆ ನಿಲ್ಲುತ್ತದೆ. ಆತ್ಮವಿಶ್ವಾಸ ನಮ್ಮಲ್ಲಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಹಲವು ಲೇಖಕರು ಇದ್ದರು.







