ಚಿನ್ನ, ಹಣಕ್ಕಾಗಿ ಖಾಸಗಿ ಮಾಹಿತಿ ಬಹಿರಂಗ ಪಡಿಸುವ ಬೆದರಿಕೆ: ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಬಂಧನ

ಸುರತ್ಕಲ್, ಡಿ.14: ಚಿನ್ನ ಹಾಗೂ ಹಣಕ್ಕಾಗಿ ಉದ್ಯಮಿಯೋರ್ವರಿಗೆ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಬೆದರಿಕೆ ಹಾಕಿದ್ದ ಆರೋಪದಲ್ಲಿ ರಾಜ್ಯ ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್(42) ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಕಾವೂರು ನಿವಾಸಿ ಸುರೇಶ್ ಎಂಬವರು ಸುರತ್ಕಲ್‌ನಲ್ಲಿ ರಾಜೇಶ್ ಪವಿತ್ರನ್ ಜೊತೆ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ, ರಾಜೇಶ್ ಪವಿತ್ರನ್ ನಡೆಸುತ್ತಿದ್ದ ಅವ್ಯವಹಾರಗಳು ಗಮನಕ್ಕೆ ಬಂದ ಕಾರಣ ಆತನೊಂದಿಗೆ ಪಾಲುದಾರಿಕೆಯಿಂದ ಹೊರ ಬರಲು ಬಯಸಿದ್ದಾಗಿ ಸುರೇಶ್ ಪೊಲೀಸರಿಗೆ ತಿಳಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಆರೋಪಿ ರಾಜೇಶ್ ಪವಿತ್ರನ್, ಸುರೇಶ್ ಅವರ ಲ್ಯಾಪ್ ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು, ಇಲ್ಲದಿದ್ದಲ್ಲಿ ಅದರಲ್ಲಿದ್ದ ಎಲ್ಲಾ ಖಾಸಗಿ ಮಾಹಿತಿಗಳನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದ. ಅಲ್ಲದೆ, ಕೈ, ಕಾಲು ಕಡಿದುಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ಸುರೇಶ್ ಅವರು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸುರೇಶ್ ಅವರ ದೂರು ದಾಖಲಿಸಿಕೊಂಡ ಪೊಲೀಸರು, ರಾಜೇಶ್ ಪವಿತ್ರನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿ ರಾಜೇಶ್ ಪವಿತ್ರನ್ ಗೆ ನೆರವು ನೀಡಿದ ಆರೋಪದಲ್ಲಿ ಡಾ. ಸನಿಜ ಎಂಬಾಕೆಯ ವಿರುದ್ಧವೂ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.